ಸಾಮಾನ್ಯವಾಗಿ ಜ್ವರ, ವಸಡಿನ ಸಮಸ್ಯೆ, ಹೊಟ್ಟೆ ಕೆಟ್ಟಾಗ ಏನು ರುಚಿಸುವುದಿಲ್ಲ. ನಾಲಿಗೆಗೆ ರುಚಿಯೇ ತಿಳಿಯುವುದಿಲ್ಲ. ಏನು ತಿಂದರೂ ಸಪ್ಪೆ ಅನುಭವವಾಗುತ್ತದೆ. ಇದನ್ನು ನಾಲಿಗೆ ಕೆಡುವುದು ಎನ್ನುತ್ತಾರೆ. ಇತ್ತೀಚಿನ ದಿನಗಳಲ್ಲಿ ರುಚಿ ಇಲ್ಲದಿರುವುದನ್ನು ರೋಗದ ಲಕ್ಷಣವೆಂದೂ ಹೇಳುತ್ತಾರೆ. ಆದರೆ ಬಹುತೇಕ ಸಂದರ್ಭಗಳಲ್ಲಿ ವೈರಲ್ ಜ್ವರದ ನಂತರ, ಹಲ್ಲಿನ ಸಮಸ್ಯೆಗಳಿದ್ದರೆ ನಾಲಿಗೆಗೆ ಆಹಾರ ರುಚಿಸುವುದಿಲ್ಲ. ಇದಕ್ಕೆ ಗಾಬರಿಪಡುವ ಅಗತ್ಯವಿಲ್ಲ ಮನೆಮದ್ದಿನಿಂದ ನಾಲಿಗೆಯ ರುಚಿಯನ್ನು ಸರಿಪಡಿಸಬಹುದು.
ಶುಂಠಿಯ ಜ್ಯೂಸ್
ನಾಲಿಗೆ ರುಚಿಯನ್ನು ಕಳೆದುಕೊಂಡಿದೆ, ಏನೂ ಆಹಾರ ರುಚಿಸುತ್ತಿಲ್ಲ ಎನ್ನುವ ಸಮಸ್ಯೆಗೆ ಶುಂಠಿ ಸಹಾಯ ಮಾಡುತ್ತದೆ. ಶುಂಠಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರಿಪಡಿಸುತ್ತದೆ. ಇದರಿಂದ ನಾಲಿಗೆಯೂ ಆರೋಗ್ಯವಾಗಿರುತ್ತದೆ.
ಹೀಗೆ ಮಾಡಿ
ಶುಂಠಿಯನ್ನು ಜಜ್ಜಿ ಅದರ ರಸವನ್ನು ತೆಗೆದುಕೊಳ್ಳಿ. ಅರ್ಧ ಚಮಚ ಶುಂಠಿ ರಸಕ್ಕೆ ಚಿಟಿಕೆ ಉಪ್ಪನ್ನು ಸೇರಿಸಿ ಸೇವಿಸಿ. ಅಥವಾ ಶುಂಠಿಯನ್ನು ಹಾಗೆಯೇ ಜಗಿಯಬಹುದು. ಇದರಿಂದ ನಾಲಿಗೆ ರುಚಿಯೂ ಸರಿಯಾಗುತ್ತದೆ. ಹೊಟ್ಟೆಯ ಸಮಸ್ಯೆ ಇದ್ದರೆ ಅದು ಕೂಡ ಶಮನವಾಗುತ್ತದೆ.
ಕಾಳು ಮೆಣಸಿನ ಪುಡಿ
ಅತ್ಯುತ್ತಮ ಮಸಾಲೆ ಪದಾರ್ಥಗಳಲ್ಲಿ ಕಾಳು ಮೆಣಸು ಕೂಡ ಒಂದು. ಇದು ನಾಲಿಗೆಯ ರುಚಿಯನ್ನು ಸರಿಪಡಿಸುವಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ.
ಹೀಗೆ ಮಾಡಿ
ಕಾಳು ಮೆಣಸಿನ ಪುಡಿಯನ್ನು ಅನ್ನ ಅಥವಾ ಗಂಜಿಯೊಂದಿಗೆ ಚಿಟಿಕೆಯಷ್ಟು ಸೇರಿಸಿ ಸೇವನೆ ಮಾಡುವುದರಿಂದ ನಾಲಿಗೆಯ ರುಚಿ ಸರಿಯಾಗುತ್ತದೆ. ಅಥವಾ ಕಾಳು ಮೆಣಸನ್ನು ಹಾಗೆಯೇ ಬಾಯಿಗೆ ಹಾಕಿ ಜಗಿಯಬಹುದು. ಇದರಿಂದಲೂ ನಾಲಿಗೆಗೆ ರುಚಿ ಸಿಗುತ್ತದೆ.
ಲಘು ಆಹಾರದ ಸೇವನೆ ಇರಲಿ
ನಾಲಿಗೆ ಕೆಟ್ಟಾಗ ಹೆಚ್ಚು ಆಹಾರ ಸೇರುವುದಿಲ್ಲ. ಅಂತಹ ಸಂದರ್ಭದಲ್ಲಿ ಹೆಚ್ಚು ಸೇವಿಸಿದರೆ ವಾಂತಿಯಾಗಬಹುದು ಅಥವಾ ವಾಕರಿಕೆ ಕಾಡಬಹುದು. ಹೀಗಾಗಿ ಗಂಜಿಯಂತಹ ಲಘು ಆಹಾರಗಳನ್ನು ಸೇವನೆ ಮಾಡುವುದು ಒಳ್ಳೆಯದು.
ಸ್ವಲ್ಪ ಸ್ವಲ್ಪವೇ ಆಗಾಗ ತಿನ್ನುತ್ತಾ ಇದ್ದರೆ ಹಸಿವೆಯನ್ನು ತಡೆಯಬಹುದು ಜೊತೆಗೆ ನಾಲಿಗೆಯನ್ನೂ ಸರಿಪಡಿಸಿಕೊಳ್ಳಬಹುದು. ನಾಲಿಗೆ ಸರಿಯಾಗುವವರೆಗೂ ಇದೇ ಅಭ್ಯಾಸವಿರಲಿ ಎನ್ನುತ್ತಾರೆ ವೈದ್ಯರು.
ಶುಂಠಿಯ ಪೌಡರ್ನ್ನೂ ಬಳಸಬಹುದು
ಶುಂಠಿಯ ಜ್ಯೂಸ್ನಂತೆ ಶುಂಠಿಯ ಪೌಡರ್ ಕೂಡ ನಾಲಿಗೆಯ ಆರೋಗ್ಯವನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ನಾಲಿಗೆಗೆ ರುಚಿ ತಿಳಿಯುತ್ತಿಲ್ಲ ಎಂದಾದರೆ ನೀವು ಶುಂಠಿಯ ಪೌಡರ್ನ್ನು ನೀರಿನಲ್ಲಿ ಹಾಕಿ ಸೇವನೆ ಮಾಡಬಹುದು.
ಆದರೆ ನೆನಪಿಡಿ ಹೆಚ್ಚು ಸೇವನೆ ಬೇಡ. ಅರ್ಧ ಲೋಟ ನೀರಿಗೆ ಅರ್ಧ ಚಮಚದಷ್ಟು ಶುಂಠಿ ಪೌಡರ್ ಸಾಕಾಗುತ್ತದೆ. ಇದು ಹೊಟ್ಟೆಯ ಸಮಸ್ಯೆಗಳನ್ನೂ ನಿವಾರಣೆ ಮಾಡುತ್ತದೆ.
ಬಿಸಿ ನೀರಿನ ಸೇವನೆ ಇರಲಿ
ಬಿಸಿ ನೀರು ನಾಲಿಗೆಯ ಮೇಲಿನ ಜೀವಕೋಶಗಳನ್ನು ಸರಿಪಡಿಸುತ್ತದೆ. ಹೀಗಾಗಿ ನಾಲಿಗೆಗೆ ರುಚಿ ಇಲ್ಲದೇ ಇದ್ದಾಗ ಆಗಾಗ ಬಿಸಿ ನೀರಿನ ಸೇವನೆ ಮಾಡುತ್ತಿರಿ. ಇದರಿಂದ ಹಸಿವೆಯೂ ಆಗುತ್ತದೆ. ನಾಲಿಗೆಗೆ ಆಹಾರವೂ ಸೇರುತ್ತದೆ. ಆದಷ್ಟು ಪ್ರತಿದಿನ ಬೆಳಗ್ಗೆ ಒಂದು ಲೋಟ ಬಿಸಿ ನೀರಿನ ಸೇವನೆ ಮಾಡುವುದನ್ನು ರೂಢಿಸಿಕೊಳ್ಳಿ. ಇದು ಆರೋಗ್ಯವನ್ನು ಕಾಪಾಡುತ್ತದೆ.