ಡಿಸೆಂಬರ್ ನಲ್ಲಿ ಬಿಡುಗಡೆ ಆಗಲಿದೆ ಶ್ರೀ ಬಾಲಾಜಿ ಸ್ಟುಡಿಯೋ ಚಿತ್ರದ ಟ್ರೈಲರ್

ಚಲನಚಿತ್ರ

ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿಕೊಟ್ಟ ನಟನೆಯ ಜೊತೆಗೆ ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ರಾಜೇಶ್ ಧ್ರುವ, ಹೊಸ ರೀತಿಯ ಸಿನಿಮಾ ಮಾಡಿದ್ದಾರೆ. ಈ ಚಿತ್ರಕ್ಕೆ ಅವರು ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಎಂದು ಹೊಸ ರೀತಿಯ ಹೆಸರು ಇಟ್ಟಿದ್ದಾರೆ. ಟೈಟಲ್ ಕಾರಣದಿಂದಾಗಿಯೇ ಈ ಸಿನಿಮಾ ಸಾಕಷ್ಟು ಕುತೂಹಲ ಕೂಡ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಪ್ರಯೋಗಾತ್ಮಕ ಚಿತ್ರಗಳತ್ತ ಮುಖ ಮಾಡಿದೆ. ಅದರಲ್ಲೂ ಹಳ್ಳಿ ಸೊಗಡಿನ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಿನಿಮಾ ಕೂಡ ಉತ್ತರ ಕನ್ನಡ ಜಿಲ್ಲೆಯ ಸೊಗಡನ್ನು ಪರಿಚಯಿಸಲಿದೆ.

ಈ ಇಡೀ ಚಿತ್ರವನ್ನು ಶಿರಸಿ, ಯಲ್ಲಾಪುರ, ಹೊನ್ನಾವರದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಅಲ್ಲಿಯ ಸ್ಥಳೀಯ  ಪ್ರತಿಭೆಗಳನ್ನು ಬಳಸಿಕೊಳ್ಳಲಾಗಿದೆ. ಈ ಚಿತ್ರದ ಮತ್ತೊಂದು ವಿಶೇಷ ಅಂದರೆ ಚಿತ್ರಕ್ಕೆ ಬಳಸಿರುವುದು ಉತ್ತರ ಕನ್ನಡ ಭಾಷೆ ಹಾಗೂ ರಮಣೀಯ ಸ್ಥಳಗಳು ಎನ್ನುವುದು ನೆನಪಿಡಬೇಕಾದ ಸಂಗತಿ. ಇಡೀ ಸಿನಿಮಾ ನೋಡುಗನ ಕಣ್ಣು ತಂಪು ಮಾಡಿದರೆ, ಚಿತ್ರಕಥೆಯ ಹೊಸತನವು ಭಾರತ ಚಿತ್ರರಂಗದಲ್ಲಿ ಇಲ್ಲಿಯವರೆಗೂ ಬಂದಿಲ್ಲ ಎನ್ನುತ್ತಾರೆ ಸಿನಿಮಾದ ನಿರ್ದೇಶಕ ರಾಜೇಶ್ ಧ್ರುವ.

ಒಬ್ಬ ಫೋಟೋಗ್ರಾಫರ್ ಹಾಗೂ ಫೋಟೋ ಸ್ಟುಡಿಯೋ ನಡುವಿನ ಭಾವನೆಯ ಹೋರಾಟವೇ ಈ ಚಿತ್ರದ ಹೈಲೈಟ್. ಇದರ ಜೊತೆಗೆ ಮುದ್ದಾದ ಪ್ರೇಮಿಗಳ ಕಥೆಯೂ ಇದೆ.  ಒಬ್ಬ ಇನ್ಶೂರೆನ್ಸ್ ಮಾಡಿಸುವವ ಹಾಗೂ ಅವನ ವೈಯಕ್ತಿಕ ಜೀವನದ ಬಗ್ಗೆ ಹಾಗೂ ಒಬ್ಬ ಜಮೀನ್ದಾರ ಮತ್ತು ಫೋಟೋಗ್ರಾಫರ್ ನಡುವಿನ ಸಂಘರ್ಷ ನೋಡುಗರಿಗೆ ಹೊಸ ಅನುಭವ ತರಿಸಲಿದೆ ಎನ್ನುತ್ತಿದೆ ಶ್ರೀ ಬಾಲಾಜಿ ಫೋಟೋ ಸ್ಟುಡಿಯ ಟೀಮ್.

ಬಳ್ಳಾರಿ ಮೂಲದವರಾದ ಸಿನಿಮಾದ ನಿರ್ಮಾಪರು ವೆಂಕಟೇಶ್ವರ ರಾವ್ ಮೊದಲ ಬಾರಿಗೆ ಸೃಜನ್ ಪ್ರೊಡಕ್ಷನ್ ಅಡಿಯಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಿರ್ದೇಶಕರಾಗಿ ಹಾಗೂ ಮುಖ್ಯ ಪಾತ್ರದಲ್ಲಿ ಕಿರುತೆರೆಯಲ್ಲಿ 6 ವರ್ಷಗಳ ಕಾಲ ಕೆಲಸ ಮಾಡಿ ಫೇಮಸ್ ಆಗಿರುವ, ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಟ ರಾಜೇಶ್ ಧ್ರುವ ಕಾಣಿಸಿಕೊಂಡಿದ್ದಾರೆ. ರವಿ ಸಾಲಿಯಾನ್, ರಾಧಿಕಾ ಅಚ್ಯುತ್ ರಾವ್, ಸಂಪತ್ ಜೆ ರಾಮ್, ಶುಭಲಕ್ಷ್ಮಿ ಸೇರಿದಂತೆ ಅನೇಕ ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ.