ಮೆಲ್ಬೋರ್ನ್ ಮೈದಾನದಲ್ಲಿ ಟೆಸ್ಟ್ ಶತಕ ಸಿಡಿಸಿದ ಕೆಲವೇ ಕೆಲವು ಬ್ಯಾಟರ್ಗಳ ಪಟ್ಟಿಯಲ್ಲಿ ಇನ್ಮುಂದೆ ನಿತೀಶ್ ಕುಮಾರ್ ರೆಡ್ಡಿ ಹೆಸರು ಕೂಡ ಕಾಣಿಸಿಕೊಳ್ಳಲಿದೆ. ಹೌದು ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ದಾಂಡಿಗ ನಿತೀಶ್ ಕುಮಾರ್ ರೆಡ್ಡಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿತೀಶ್ 171 ಎಸೆತಗಳಲ್ಲಿ ಚೊಚ್ಚಲ ಶತಕ ಪೂರೈಸಿದರು.
ಇದಾದ ಬಳಿಕ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನ ಕಾಮೆಂಟ್ರಿ ರೂಮ್ ಬಳಿ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ ದಿ ಲೆಜೆಂಡ್ ಸುನಿಲ್ ಗವಾಸ್ಕರ್ ಅವರನ್ನು ಭೇಟಿಯಾಗಿದ್ದಾರೆ. ಗವಾಸ್ಕರ್ ಅವರೊಂದಿಗೆ ಮಾತನಾಡುತ್ತಾ ಮುತ್ಯಾಲ ರೆಡ್ಡಿ ದಂಪತಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದು ವಿಶೇಷವಾಗಿತ್ತು. ಇದೀಗ ಗವಾಸ್ಕರ್ ಅವರಿಂದ ಆಶೀರ್ವಾದ ಪಡೆಯುತ್ತಿರುವ ನಿತೀಶ್ ಕುಮಾರ್ ರೆಡ್ಡಿ ಅವರ ಪೋಷಕರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಸ್ಯಾಮ್ ಕೊನ್ಸ್ಟಾಸ್ (60), ಉಸ್ಮಾನ್ ಖ್ವಾಜಾ (57) ಹಾಗೂ ಮಾರ್ನಸ್ ಲಾಬುಶೇನ್ (72) ಅರ್ಧಶತಕ ಬಾರಿಸಿದರೆ, ಸ್ಟೀವ್ ಸ್ಮಿತ್ (140) ಶತಕ ಸಿಡಿಸಿದರು. ಈ ಮೂಲಕ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ನಲ್ಲಿ 474 ರನ್ ಕಲೆಹಾಕಿದೆ.
ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಟೀಮ್ ಇಂಡಿಯಾ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಇದಾಗ್ಯೂ 8ನೇ ವಿಕೆಟ್ಗೆ ಜೊತೆಯಾದ ವಾಷಿಂಗ್ಟನ್ ಸುಂದರ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಶತಕದ ಜೊತೆಯಾಟವಾಡಿದರು.