ಹುಬ್ಬಳ್ಳಿ: ವಕ್ಫ್ ವಿಷಯ ಮುಗಿದು ಹೋಗಿದೆ. ಉಪ ಚುನಾವಣೆ ಇರುವ ಕಾರಣಕ್ಕೆ ಬಿಜೆಪಿಯವರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಶಾಸಕ ಲಕ್ಷ್ಮಣ ಸವದಿ ಕುಟುಕಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರನ್ನು ನಾನು ಬಹಳ ಹತ್ತರದಿಂದ ನೋಡಿದ್ದೇನೆ. ಏನೋ ಒಂದು ಸತ್ತು ಹೋಗಿದೆ ಅಂದರೂ ಅವರು ಹಲ್ಲು ಕಿಸಿಯುತ್ತಾರೆ. ಚುನಾವಣೆ ಇಲ್ಲದಿದ್ದರೆ ಮಾತನಾಡುತ್ತಿರಲಿಲ್ಲ.
ಇದೀಗ ಉಪ ಚುನಾವಣೆ ಇರುವ ಕಾರಣಕ್ಕೆ ವಕ್ಫ್ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.
ಶಿಗ್ಗಾವಿ ಕ್ಷೇತ್ರದಲ್ಲಿ ಬೊಮ್ಮಾಯಿ ವಿರೋಧಿ ಅಲೆ ಇದೆ. ಕಾರಣ ಅಲ್ಲಿ ನಾವೇ ಗೆಲ್ಲುತ್ತೇವೆ. ಈ ಕ್ಷೇತ್ರದ ಉಪ ಚುನಾವಣೆ ವಿಚಾರವಾಗಿ ಮೂರು ಪುರಸಭೆ, ಆರು ಜಿಲ್ಲಾ ಪಂಚಾಯತ್ , 23 ತಾಲೂಕ ಪಂಚಾಯತ್ ವಾರು ಹಾಗೂ ಅನೇಕ ಹಿರಿಯರ ಜತೆ ಸಭೆ ಮಾಡಿದ್ದೇವೆ. ಪಕ್ಷದ ಪದಾಧಿಕಾರಿಗಳಿಗೆ ಹಲವು ಸೂಚನೆ ಕೊಟ್ಟಿದ್ದೇವೆ.
ನಮ್ಮ ಪ್ರಕಾರ ಶಿಗ್ಗಾವಿಯಲ್ಲಿ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗ್ಯಾರಂಟಿ ಪರಿಷ್ಕರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಎಂ ಮತ್ತು ಡಿಸಿಎಂ ಈ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ. ಬಿಜೆಪಿಯವರು ಇದರಲ್ಲೂ ಸುಳ್ಳು ಹೇಳುತ್ತಿದ್ದಾರೆ ಎಂದರು.