ಬಾಕು: ಅಜರ್ ಬೈಜಾನ್ ನಲ್ಲಿ (Azerbaijan) ನಡೆಯುತ್ತಿದ್ದ ಸೇನೆ ಹಾಗೂ ಪ್ರತ್ಯೇಕತಾವಾದಿ ಅರ್ಮೇನಿಯನ್ ಹೋರಾಟಗಾರರ ನಡುವಿನ ಯುದ್ಧ ಕೊನೆಯಾಗಿದೆ. ಪ್ರತ್ಯೇಕವಾದಿ ಹೋರಾಟಗಾರರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಿದ್ದಾರೆ. ಈ ಮೂಲಕ ಬೇರ್ಪಟ್ಟಿದ್ದ ನಾಗೋರ್ನೊ-ಕರಾಬಖ್ (Karabakh) ಮೇಲೆ ಸರ್ಕಾರ ಮರಳಿ ನಿಯಂತ್ರಣವನ್ನು ಪಡೆದುಕೊಂಡಿದೆ ಎಂದು ಅಜರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಹೇಳಿದ್ದಾರೆ.
ಬೇರ್ಪಟ್ಟ ಪ್ರದೇಶವನ್ನು ಅಜರ್ಬೈಜಾನ್ನ ಉಳಿದ ಭಾಗಗಳ ಮರುಜೋಡಣೆ ಕುರಿತು ಇಂದು (ಗುರುವಾರ) ಯೆವ್ಲಾಖ್ ನಗರದಲ್ಲಿ ಮಾತುಕತೆ ನಡೆಯಲಿದೆ. ಈ ವೇಳೆ ಸರ್ಕಾರದ ಪ್ರತಿನಿಧಿಗಳು ಹಾಗೂ ಪ್ರತ್ಯೇಕವಾದಿಗಳ ಮುಖಂಡರು ಭಾಗವಹಿಸಲಿದ್ದಾರೆ. ಈ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಿಲಿಟರಿ ದಾಳಿಯಿಂದಾಗಿ 25 ಮಂದಿ ಸಾವನ್ನಪ್ಪಿದ್ದರು. ಘಟನೆಯಲ್ಲಿ ಸ್ಥಳೀಯ ಇಬ್ಬರು ಸೇರಿದಂತೆ 138 ಜನರು ಗಾಯಗೊಂಡಿದ್ದರು. ಈ ಬಗ್ಗೆ ಪ್ರತ್ಯೇಕತಾವಾದಿ ಅರ್ಮೇನಿಯನ್ ಮಾನವ ಹಕ್ಕುಗಳ ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಸೋವಿಯತ್ ಒಕ್ಕೂಟವು ಇಲ್ಲಿಂದ ಬೇರ್ಪಟ್ಟ ನಂತರ ಅರ್ಮೇನಿಯನ್ ಪ್ರತ್ಯೇಕತಾವಾದಿಗಳು 1990ರ ದಶಕದ ಆರಂಭದಲ್ಲಿ ಅಜರ್ಬೈಜಾನ್ ಪ್ರದೇಶವನ್ನು ವಶಪಡಿಸಿಕೊಂಡರು. ಅಲ್ಲಿಂದ ಇಲ್ಲಿಯವರೆಗೂ ನಡೆದ ಘರ್ಷಣೆಯಲ್ಲಿ ಸುಮಾರು 30,000 ಜನರನ್ನು ಬಲಿ ತೆಗೆದುಕೊಂಡಿದೆ.