ಮಾಸ್ಕೋ : ಜಗತ್ತು ಟರ್ನಿಂಗ್ ಪಾಯಿಂಟ್ನಲ್ಲಿದ್ದು, ರಷ್ಯಾ ವಿರುದ್ಧ ನಿಜವಾದ ಯುದ್ಧ ಶುರುವಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಮಾಸ್ಕೋದ ರೆಡ್ ಸ್ಕ್ವೇರ್ ವಿಕ್ಟರಿ ಡೇ ಪರೇಡ್ನಲ್ಲಿ ಮಾತನಾಡಿದ ಅವರು, ಎರಡನೇ ಮಹಾಯುದ್ಧದಲ್ಲಿ ನಾಝಿ ಜರ್ಮನಿಯ ವಿರುದ್ಧದ ವಿಜಯದ ವಾರ್ಷಿಕೋತ್ಸವವನ್ನು ದೇಶವು ಆಚರಿಸುತ್ತಿರುವಾಗ, ಜಗತ್ತು ಟರ್ನಿಂಗ್ ಪಾಯಿಂಟ್ನಲ್ಲಿದೆ. ನಾವು ದೇಶದ ಭವಿಷ್ಯಕ್ಕಾಗಿ ದೇಶಭಕ್ತಿಯ ಹೋರಾಟದಲ್ಲಿ ತೊಡಗಿರುವುದಾಗಿ ತಿಳಿಸಿದ್ದಾರೆ.
ಇಂದು, ನಾಗರಿಕತೆಯು ಮತ್ತೊಮ್ಮೆ ನಿರ್ಣಾಯಕ ತಿರುವಿನ ಹಂತದಲ್ಲಿದೆ. ನಮ್ಮ ತಾಯ್ನಾಡಿನ ವಿರುದ್ಧ ನಿಜವಾದ ಯುದ್ಧ ಶುರುವಾಗಿದೆ. ನಾವು ಅಂತರಾಷ್ಟ್ರೀಯ ಭಯೋತ್ಪಾದನೆಯನ್ನು ಹಿಮ್ಮೆಟ್ಟಿಸಿದ್ದೇವೆ, ನಾವು ಡೊನ್ಬಾಸ್ ನಿವಾಸಿಗಳನ್ನು ರಕ್ಷಿಸುತ್ತೇವೆ, ನಮ್ಮ ಭದ್ರತೆಯನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಪುಟಿನ್ ಹೇಳಿದ್ದಾರೆ.
ರೆಡ್ ಸ್ಕ್ವೇರ್ನಲ್ಲಿ 10 ನಿಮಿಷಗಳ ಭಾಷಣದಲ್ಲಿ ಪುಟಿನ್, ಉಕ್ರೇನ್ನಲ್ಲಿ ರಷ್ಯಾ ಸುಮಾರು 15 ತಿಂಗಳುಗಳಲ್ಲಿ ನಡೆಸುತ್ತಿದ್ದ ಯುದ್ಧದ ವೇಳೆ ಹಲವು ಬಾರಿ ನೀಡಿದ ಪರಿಚಿತ ಸಂದೇಶಗಳನ್ನು ಪುನರಾವರ್ತಿಸಿದರು.
ಪಾಶ್ಚಿಮಾತ್ಯ ಜಾಗತಿಕ ಗಣ್ಯರು ರಷ್ಯಾಫೋಬಿಯಾ ಮತ್ತು ಆಕ್ರಮಣಕಾರಿ ರಾಷ್ಟ್ರೀಯತೆಯನ್ನು ಬಿತ್ತುತ್ತಿದ್ದಾರೆ. ಆದರೆ ಉಕ್ರೇನಿಯನ್ ಜನರು ರಾಜ್ಯ ದಂಗೆಗೆ ಒತ್ತೆಯಾಳುಗಳಾಗಿ ಮತ್ತು ಪಶ್ಚಿಮದ ಮಹತ್ವಾಕಾಂಕ್ಷೆಗಳಿಗೆ ಮಾರ್ಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.