ಬರ್ಲಿನ್: ಜಗತ್ತಿನ ಅತ್ಯಂತ ಹಳೆಯ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಆಸ್ಟ್ರಿಯಾ ಸರ್ಕಾರದ ಮಾಲೀಕತ್ವದ ವೀನರ್ ಝೈಟುಂಗ್ ಪತ್ರಿಕೆ ಶುಕ್ರವಾರ ತನ್ನ ಮುದ್ರಣ ಕಾರ್ಯ ಸ್ಥಗಿತಗೊಳಿಸಿದೆ.
1703 ಆ.8ರಿಂದ ಸತತವಾಗಿ 320 ವರ್ಷಗಳ ಕಾಲ ಪ್ರಕಟಗೊಳ್ಳುತ್ತಾ ಬಂದಿದ್ದ ವೀನರ್ ಝೈಟುಂಗ್ ಪತ್ರಿಕೆ ಇದೀಗ ತನ್ನ ಕೆಲಸವನ್ನು ನಿಲ್ಲಿಸಿದೆ.
ಆಸ್ಟ್ರಿಯಾ ಸರ್ಕಾರದ ಮಾಲೀಕತ್ವ ಹೊಂದಿರುವ ಈ ಪತ್ರಿಕೆ ಆರಂಭದಲ್ಲಿ “ವಿನರಿಯಸ್ ಡಿಯರಿಯಮ್’ ಎಂಬ ಹೆಸರಿನಿಂದ ಪ್ರಕಟವಾಗುತ್ತಿತ್ತು. ಪ್ರಕಟವಾಗಿರುವ ಕೊನೆಯ ಆವೃತ್ತಿಯಲ್ಲಿ “320 ವರ್ಷ, 12 ಅಧ್ಯಕ್ಷರು, 10 ಚಕ್ರವರ್ತಿಗಳು, 2 ಗಣತಂತ್ರ, 1 ಪತ್ರಿಕೆ’ ಎಂದು ಜರ್ಮನ್ ಭಾಷೆಯಲ್ಲಿ ಮುದ್ರಿಸಲಾಗಿದೆ.
ಸರ್ಕಾರಿ ಪತ್ರಿಕೆಯಾಗಿದ್ದರೂ, ಸಂಪಾದಕೀಯ ನಿಲುವುಗಳಲ್ಲಿ ಸ್ವಾತಂತ್ರ್ಯವಿತ್ತು. ಮುದ್ರಣ ಆವೃತ್ತಿಯಲ್ಲಿ ಕಂಪನಿಗಳು ತಮ್ಮ ಮಾಹಿತಿ ಪ್ರಕಟಿಸಬೇಕಾದರೆ ಪಾವತಿ ಮಾಡಬೇಕು ಎಂಬ ಕಾನೂನು ಜಾರಿಗೆ ತಂದ ಬಳಿಕ ಪತ್ರಿಕೆಯ ಆದಾಯ ಗಣನೀಯವಾಗಿ ತಗ್ಗಿತ್ತು. ಹೀಗಾಗಿಯೇ, ಉದ್ಯೋಗ ಕಡಿತವನ್ನೂ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ಅದು ಆನ್ಲೈನ್ನಲ್ಲಿ ತಿಂಗಳಿಗೆ ಒಂದು ಆವೃತ್ತಿ ಪ್ರಕಟಿಸಲಿದೆ.