ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿ ಮೇಲೆ ನಿಂತು ಯುವಕನೊಬ್ಬ ಆಜಾನ್ ಕೂಗಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಆಜಾನ್ ಹಾಗೂ ಅಲ್ಲಾಹು ಬಗ್ಗೆ ಮಾಜಿ ಸಚಿವ ಈಶ್ವರಪ್ಪ (KS Eshwarappa) ಅವಹೇಳನ ಆರೋಪ ಹಿನ್ನೆಲೆಯಲ್ಲಿ ಶುಕ್ರವಾರ ಯುವಕನೊಬ್ಬ ಆಜಾನ್ (Azan) ಕೂಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯುವಕ ಆಜಾನ್ ಕೂಗುತ್ತಿದ್ದ ಸ್ಥಳೀಯರ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಶಿವಮೊಗ್ಗದ (Shivamogga) ಜಿಲ್ಲಾಧಿಕಾರಿ ಕಚೇರಿ (DC Office) ಎದುರು ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿ, ಈಶ್ವರಪ್ಪ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈ ವೇಳೆ ಮುಸ್ಲಿಂ ಯುವಕನೊಬ್ಬ ಉದ್ದಟತನ ಪ್ರದರ್ಶಿಸಿದ್ದಾನೆ. ಜಿಲ್ಲಾಧಿಕಾರಿ ಕಚೇರಿ ಮೇಲೆ ಹತ್ತಿ ಯುವಕನೊಬ್ಬ ಆಜಾನ್ ಕೂಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಆಜಾನ್ ಕೂಗುವುದಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ.
ಜಿಲ್ಲಾಧಿಕಾರಿ ಕಚೇರಿ ಮೇಲೆ ಆಜಾನ್ ಕೂಗದಂತೆ ಪೊಲೀಸರ ತಾಕೀತು ನಡೆಸಿದ್ದಾರೆ. ಈ ವೇಳೆ ಮತ್ತೋರ್ವ ಯುವಕ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿದ್ದಾನೆ. ಆಜಾನ್ ಬಗ್ಗೆ ಮಾತನಾಡುವುದಕ್ಕೆ ಈಶ್ವರಪ್ಪ ಯಾರು? ಇವತ್ತು ಇಲ್ಲಿ ಕೂಗಿದ್ದೇವೆ? ನಾಳೆ ವಿಧಾನಸೌಧದಲ್ಲಿ ಕೂಗುತ್ತೇವೆ. ಇದು ತಾಯಿ ಬಗ್ಗೆ ಮಾತನಾಡಿದ್ದಲ್ಲ ಅಲ್ಲಾಹ ಬಗ್ಗೆ ಮಾತನಾಡಿದ್ದು ಎಂದು ಕಿಡಿಕಾರಿದ್ದಾನೆ.
ಘಟನೆಯ ವೇಳೆ ಆಜಾನ್ ಕೂಗಿ ಉದ್ಧಟತನ ತೋರಿದ ಯುವಕನಿಗೆ ಮುಸ್ಲಿಂ ಮುಖಂಡರು ಯುವಕನಿಗೆ ಬೈದು ಬುದ್ಧಿ ಹೇಳಿದ್ದಾರೆ. ನಂತರ ಪ್ರತಿಭಟನಾಕಾರರನ್ನು ಸ್ಥಳದಿಂದ ಪೊಲೀಸರು ವಾಪಸ್ ಕಳುಹಿಸಿದ್ದಾರೆ.