ಸಿಹಿ ಗೆಣಸು ಎಂದ ತಕ್ಷಣ ಜನರ ನೆನಪಿಗೆ ಬರುವುದು ಸಂಕ್ರಾಂತಿ ಹಬ್ಬ. ಇದನ್ನು ನೆಲ ಗೆಣಸು ಎಂದು ಸಹ ಕರೆಯುತ್ತಾರೆ. ಸಂಕ್ರಾಂತಿ ಹಬ್ಬದ ಸಮಯದಲ್ಲಿ ವಿಶೇಷವಾಗಿ ನಮ್ಮ ದಕ್ಷಿಣ ಕರ್ನಾಟಕದಲ್ಲಿ ಮನೆ ಮನೆಯಲ್ಲಿ ಕಡಲೆಕಾಯಿ, ಹಸಿ ಅವರೆಕಾಯಿ ಮತ್ತು ಸಿಹಿ ಗೆಣಸಿನ ಆಹಾರ ಪದ್ಧತಿಯ ಸಮಾಗಮ ಇರುತ್ತದೆ.
ಮಕ್ಕಳು, ದೊಡ್ಡವರು ಮತ್ತು ವಯಸ್ಸಾದವರು ಎನ್ನದೆ ಎಲ್ಲರೂ ಸಹ ಬಹಳ ಇಷ್ಟ ಪಟ್ಟು ಇವುಗಳ ಸೇವನೆ ಮಾಡುತ್ತೇವೆ. ಕೇವಲ ಸುಗ್ಗಿಯ ಸಂಭ್ರಮದಲ್ಲಿ ಮಾತ್ರ ಸಿಹಿಗೆಣಸಿನ ಸೇವನೆ ಮಾಡಬೇಕು ಎಂದೇನಿಲ್ಲ. ಏಕೆಂದರೆ ವರ್ಷದ 365 ದಿನದಲ್ಲಿ ಸಹ ಸಿಹಿಗೆಣಸು ತಿನ್ನಲು ಸಿಗುತ್ತದೆ.
ಸಿಹಿ ಗೆಣಸಿನಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳು ಇರುತ್ತವೆ. ಬಹುತೇಕ ಜನರಿಗೆ ಈ ಬಗ್ಗೆ ತಿಳಿದಿಲ್ಲ. ಸಿಹಿ ಗೆಣಸಿನ ಎಲೆಗಳು ಸಹ ಆರೋಗ್ಯಕ್ಕೆ ಒಳ್ಳೆಯ ಲಾಭಗಳನ್ನು ತಂದು ಕೊಡುತ್ತವೆ.
ಈ ಲೇಖನದಲ್ಲಿ ಸಿಹಿಗೆಣಸಿನ ಎಲೆಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡು ಸಿಗುವಂತಹ ಲಾಭಗಳನ್ನು ಹೇಗೆ ನಿಮ್ಮದಾಗಿಸಿಕೊಳ್ಳಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಬಹುದು.
ಸಿಹಿಗೆಣಸಿನ ಎಲೆಗಳಲ್ಲಿ ಕಂಡುಬರುವ ಪೌಷ್ಟಿಕಾಂಶಗಳ ವಿವರ
- ಚೆನ್ನಾಗಿ ಬಲಿತಿರುವ ಸಿಹಿ ಗೆಣಸಿನ ಎಲೆಗಳಲ್ಲಿ ರಿಬಾಫ್ಲವಿನ್ ಮತ್ತು ವಿಟಮಿನ್ ಬಿ6 ಅಂಶಗಳು ಗಣನೀಯ ಪ್ರಮಾಣದಲ್ಲಿ ಕಂಡು ಬರುತ್ತವೆ.
- ಅಧ್ಯಯನಗಳು ಹೇಳುವಂತೆ ನೀರಿನಲ್ಲಿ ಕರಗುವ ವಿಟಮಿನ್ ಅಂಶಗಳು ಮತ್ತು ಇನ್ನಿತರ ಖನಿಜಾಂಶಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದರಿಂದ ಮನುಷ್ಯ ದೇಹದ ದಿನ ನಿತ್ಯದ ಕಾರ್ಯಚಟುವಟಿಕೆಗೆ ಅನುಕೂಲವಾಗುವಂತೆ ಅತ್ಯುತ್ತಮವಾದ ಮೆಟಬಾಲಿಸಂ ಪ್ರಕ್ರಿಯೆಯನ್ನು ನಿರ್ವಹಿಸಿಕೊಂಡು ದೇಹ ಆರೋಗ್ಯದಿಂದ ಕೂಡಿರುತ್ತದೆ.
- ಆಸ್ಕಾರ್ಬಿಕ್ ಆಸಿಡ್ ಎಂಬ ಆಂಟಿಆಕ್ಸಿಡೆಂಟ್ ಅಂಶ ಸಿಹಿಗೆಣಸಿನ ಎಲೆಗಳಲ್ಲಿ ಕಂಡುಬರುವುದರಿಂದ ಫ್ರೀ ರಾಡಿಕಲ್ ಗಳ ಹಾನಿಯಿಂದ ಮನುಷ್ಯನ ದೇಹವನ್ನು ರಕ್ಷಣೆ ಮಾಡುತ್ತವೆ. ಚೆನ್ನಾಗಿ ಬಲಿತಿರುವ ಸಿಹಿಗೆಣಸಿನ ಎಲೆಗಳಲ್ಲಿ ಬೇರೆ ಎಲೆಗಳಿಗೆ ಹೋಲಿಸಿದರೆ ದುಪ್ಪಟ್ಟು ಪ್ರಮಾಣದ ಪೌಷ್ಟಿಕ ಸತ್ವಗಳು ಲಾಭಕಾರಿ ಹಾಗಿರುತ್ತವೆ.
- ಸುಮಾರು 100 ಗ್ರಾಂ ಸಿಹಿ ಗೆಣಸಿನ ಎಲೆಗಳನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಅದರಲ್ಲಿ ಒಬ್ಬ ಮನುಷ್ಯನ ದಿನದ ಅಗತ್ಯತೆಗೆ ತಕ್ಕಂತೆ ಶೇಕಡ 15ರಷ್ಟು ಪೌಷ್ಟಿಕಾಂಶಗಳು ಇರುತ್ತದೆ. ಮಕ್ಕಳಿಗೆ ಶೇಕಡ 30ರಷ್ಟು ಪೌಷ್ಟಿಕ ಸತ್ವಗಳು ಸಿಗಲಿವೆ.