ಹಸಿ ತೆಂಗಿನಕಾಯಿಯನ್ನು ನೀವು ಪ್ರತಿದಿನ ಸೇವಿಸಿದರೆ ಸಾಕಷ್ಟು ಆರೋಗ್ಯಕರ ಪ್ರಯೋಜನಗಳು ಸಿಗುತ್ತವೆ. ತೆಂಗಿನ ಎಣ್ಣೆಯ ಪ್ರಬಲ ಗುಣಗಳ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ. ಆದರೆ ಇಂದಿನ ಲೇಖನದಲ್ಲಿ, ಹಸಿ ತೆಂಗಿನಕಾಯಿಯ ತಿರುಳಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸಲಾಗಿದೆ.
ಹಸಿ ತೆಂಗಿನ ತಿರುಳನ್ನು ತಿನ್ನುವುದು ಆರೋಗ್ಯಕ್ಕೆ ಏಕೆ ಒಳ್ಳೆಯದು?
ಹಸಿ ತೆಂಗಿನ ತಿರುಳಿಗೆ ನಾವು ಏಕೆ ಒತ್ತು ನೀಡುತ್ತಿದ್ದೇವೆ ಎಂದು ನಿಮ್ಮಲ್ಲಿ ಬಹಳಷ್ಟು ಜನರು ಆಶ್ಚರ್ಯ ಪಡಬಹುದು. ಇದು ಪೌಷ್ಠಿಕಾಂಶಗಳಿಂದ ಸಮೃದ್ದವಾಗಿರುದರಿಂದ ಇದು ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ. ಹಸಿ ತೆಂಗಿನ ತಿರುಳಿನಲ್ಲಿ ತಾಮ್ರ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ, ಸೆಲೆನಿಯಮ್, ಸತು ಇತ್ಯಾದಿ ಪೋಷಕಾಂಶಗಳಿವೆ. ಇದು ಆರೋಗ್ಯಕರ ಕೊಬ್ಬಿನಿಂದ ಕೂಡಿದ್ದು ಆರೋಗ್ಯಕರ ದೇಹ ಮತ್ತು ಸಕ್ರಿಯ ಮನಸ್ಸಿಗೆ ಒಳ್ಳೆಯದಾಗಿವೆ. ಹಸಿ ತೆಂಗಿನ ತಿರುಳನ್ನು ಪ್ರತಿದಿನ ಸೇವಿಸುವುದರಿಂದ ಫೋಲೇಟ್, ವಿಟಮಿನ್ ಸಿ ಮತ್ತು ಥಿಯಾಮಿನ್ ಮೊದಲಾದವು ಲಭ್ಯವಾಗುವ ಮೂಲಕ ಒಟ್ಟಾರೆ ಆರೋಗ್ಯವನ್ನು ಉತ್ತಮಗೊಳಿಸುತ್ತವೆ.
ತೆಂಗಿನ ಎಣ್ಣೆ ಹಸಿ ತೆಂಗಿನ ತಿರುಳಿನಲ್ಲಿರುವ ಉಪ ಉತ್ಪನ್ನವಾಗಿದೆ ಮತ್ತು ಈ ಅಂಶದಿಂದಲೂ ಇದು ಪೌಷ್ಟಿಕವಾಗಿದೆ. ನೀವು ತೆಂಗಿನ ಎಣ್ಣೆಯನ್ನು ಅಡುಗೆಗೂ ಬಳಸಬಹುದು, ಅಥವಾ ತ್ವಚೆ ಮತ್ತು ಕೂದಲಿಗೂ ಬಳಸಬಹುದು. ಕೊಬ್ಬರಿ ಎಣ್ಣೆಯಿಂದ ಬಾಯಿಯನ್ನು ಮುಕ್ಕಳಿಸಿಕೊಳ್ಳುವುದರಿಂದಲೂ ಕೆಲವಾರು ಪ್ರಯೋಜನಗಳಿವೆ. ಬನ್ನಿ, ತೆಂಗಿನ ತಿರುಳನ್ನು ಸೇವಿಸುವ ಪ್ರಯೋಜನಗಳ ಬಗ್ಗೆ ಅರಿಯೋಣ.
ತೂಕ ಇಳಿಕೆಗೆ ನೆರವಾಗುತ್ತದೆ
ಹಸಿ ತೆಂಗಿನಕಾಯಿ ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುವ ಅತ್ಯುತ್ತಮ ಆಹಾರವಾಗಿದೆ. ಹೌದು! ಹಸಿ ತೆಂಗಿನಕಾಯಿ ನಿಮ್ಮ ಹಸಿವನ್ನು ನಿಗ್ರಹಿಸುತ್ತದೆ ಇದರಿಂದ ತೂಕ ಇಳಿಕೆಯ ಪ್ರಯತ್ನಗಳು ಹೆಚ್ಚು ಸಫಲವಾಗುತ್ತವೆ. ಇದರ ಜೊತೆಗೇ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಹಸಿ ತೆಂಗಿನಕಾಯಿಯಲ್ಲಿರುವ ಟ್ರೈಗ್ಲಿಸರೈಡ್ಗಳು ದೇಹದ ಕೊಬ್ಬನ್ನು ವೇಗವಾಗಿ ಬಳಸಿಕೊಳ್ಳುವ ಮೂಲಕ ತೂಕ ಇಳಿಕೆ ಶೀಘ್ರವಾಗಿ ಸಾಧ್ಯವಾಗುತ್ತದೆ.
ಜೀರ್ಣಂಗಗಳ ಆರೋಗ್ಯವನ್ನು ಹೆಚ್ಚಿಸುತ್ತದೆ
ಹಸಿ ತೆಂಗಿನಕಾಯಿಯ ತಿರುಳನ್ನು ತಿನ್ನುವುದರಿಂದ ಹೊಟ್ಟೆಯ ತೊಂದರೆಗಳು, ಮಲಬದ್ಧತೆ ಮುಂತಾದ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ಮಲಬದ್ಧತೆಗೆ ಒಂದು ಪ್ರಮುಖ ಕಾರಣವೆಂದರೆ ಆಹಾರದಲ್ಲಿ ನಾರಿನಂಶದ ಕೊರತೆ. ಅಹಾರದಲ್ಲಿರುವ ಕರಗುವ ಮತ್ತು ಕರಗದ ನಾರುಗಳು ಚಯಾಪಚಯ ಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಹಸಿ ತೆಂಗಿನಕಾಯಿಯಲ್ಲಿ ಕರಗುವ ನಾರಿನಂಶ ಅಧಿಕವಾಗಿದೆ ಮತ್ತು ಇದರಿಂದ ಇದು ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಕರುಳಿನಲ್ಲಿ ಆಹಾರದ ಚಲನೆಯನ್ನೂ ಸುಲಭಗೊಳಿಸುತ್ತದೆ.
ಕೂದಲಿನ ಆರೋಗ್ಯವನ್ನು ಉತ್ತಮಗೊಳಿಸುತ್ತದೆ
ನಿಮ್ಮ ಕೂದಲಿಗೆ ತೆಂಗಿನಕಾಯಿ ಸಹ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ತೆಂಗಿನ ಎಣ್ಣೆ ಮತ್ತು ತೆಂಗಿನ ಹಾಲು ಕೂದಲಿನ ಸಮಸ್ಯೆಗಳನ್ನು ಹೇಗೆ ನಿವಾರಿಸುತ್ತದೆ ಎಂಬುದರಂತೆಯೇ, ಹಸಿ ತೆಂಗಿನಕಾಯಿಯ ತಿರುಳನ್ನು ತಿನ್ನುವುದೂ ಒಟ್ಟಾರೆ ಆರೋಗ್ಯಕ್ಕೆ ಅದ್ಭುತವಾಗಿದೆ. ನೀವು ಒಣ ಮತ್ತು ಸಿಕ್ಕುಸಿಕ್ಕಾಗಿರುವ ಕೂದಲನ್ನು ಹೊಂದಿದ್ದರೆ, ನೆತ್ತಿಯ ಜಲಸಂಚಯನವನ್ನು ಹೆಚ್ಚಿಸಲು ಸಹಾಯ ಮಾಡುವ ಕಾರಣದಿಂದಾಗಿಯಾದರೂ ನೀವು ಹಸಿ ತೆಂಗಿನಕಾಯಿಯ ತಿರುಳನ್ನು ಯನ್ನು ಸೇವಿಸಬೇಕು. ಹಸಿ ತೆಂಗಿನಕಾಯಿ ಆರೋಗ್ಯಕರ ಕೊಬ್ಬನ್ನು ಹೊಂದಿದ್ದು ಅದು ನಿಮ್ಮ ಕೂದಲನ್ನು ಪೋಷಿಸುತ್ತದೆ ಮತ್ತು ಅಗತ್ಯವಾದ ತೇವಕಾರಕ ಪೋಷಣೆಯನ್ನು ಒದಗಿಸುತ್ತದೆ.
ನೈಸರ್ಗಿಕ ಹೊಳಪು ಮತ್ತು ಚರ್ಮದ ಹೊಳಪನ್ನು ಮರುಪಡೆಯಲು ನೆರವಾಗುತ್ತದೆ
ಹಸಿ ತೆಂಗಿನಕಾಯಿಯ ತಿರುಳನ್ನು ಸೇವಿಸುವುದರಿಂದ ನಿಮ್ಮ ತ್ವಚೆ ಮೃದು, ನಯ ಮತ್ತು ಕಾಂತಿಯುಕ್ತವಾಗಲು ಸಾಧ್ಯವಾಗುತ್ತದೆ. ಹಸಿ ತೆಂಗಿನಕಾಯಿಯಲ್ಲಿರುವ ಮೊನೊಲೌರಿನ್ ಮತ್ತು ಲಾರಿಕ್ ಆಮ್ಲ (monolaurin and lauric acid ) ಗಳು ಪ್ರಬಲ ಬ್ಯಾಕ್ಟೀರಿಯಾ ನಿರೋಧಕ ಮತ್ತು ಶಿಲೀಂಧ್ರ ನಿವಾರಕ ಗುಣಗಳನ್ನು ಹೊಂದಿವೆ. ಆದ್ದರಿಂದ, ಹಸಿ ತೆಂಗಿನಕಾಯಿಯ ತಿರುಗಳನ್ನು ಸೇವಿಸುವುದರಿಂದ ಮೊಡವೆ ಮತ್ತು ಚರ್ಮದ ಇತರ ಸಮಸ್ಯೆಗಳನ್ನು ನಿವಾರಿಸುವ ಜೊತೆಗೇ ಇವು ಬಾರದಂತೆ ತಡೆಗಟ್ಟಬಹುದು.
ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ
ಹಸಿ ತೆಂಗಿನಕಾಯಿಯ ತಿರುಳನ್ನು ತಿನ್ನುವುದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರ ಬ್ಯಾಕ್ಟೀರಿಯಾ ವಿರೋಧಿ ಮತ್ತು ವೈರಸ್ ನಿರೋಧಕ ಗುಣಲಕ್ಷಣಗಳಿಂದಾಗಿ, ಇದು ಸೋಂಕುಗಳು ಮತ್ತು ರೋಗಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಹಸಿ ತೆಂಗಿನಕಾಯಿಯ ತಿರುಳನ್ನು ತಿನ್ನುವುದು ನರವೈಜ್ಞಾನಿಕ ಕಾಯಿಲೆಗಳನ್ನು ತಡೆಯಲೂ ಸಹಾಯ ಮಾಡುತ್ತದೆ. ನ್ಯೂಟ್ರಿಯೆಂಟ್ (Nutrient) ಎಂಬ ಮಾಧ್ಯಮದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹಸಿ ತೆಂಗಿನಕಾಯಿಯಲ್ಲಿ ಟ್ರೈಗ್ಲಿಸರೈಡ್ಗಳಿದ್ದು, ಇದು ಆಲ್ ಝೈಮರ್ಸ್ ಕಾಯಿಲೆ ಮತ್ತು ಇತರ ಅರಿವಿನ ಅಸ್ವಸ್ಥತೆಗಳನ್ನು ತಡೆಯಲು ಸಹಾಯ ಮಾಡುತ್ತದೆ.