ಇದು ಭಾರತದ ಭೂಪಟದಲ್ಲಿ ಇದ್ದು ಇಲ್ಲದಂತಿರುವ ಹಳ್ಳಿಯ ಶೋಚನೀಯ ಬದುಕಿನ ನೋವಿನ ಕಥೆ-ವ್ಯಥೆ. ಒಂದು ಕಾಲದಲ್ಲಿ ಕಂದಾಯ ಕಟ್ಟುತ್ತಿದ್ದ ಗ್ರಾಮಸ್ಥರು ಈಗ ವಂಚಿತರಾಗಿದ್ದಾರೆ. ಗ್ರಾಮಕ್ಕೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ದುರ್ಗಮ ಕಾಡಿನಲ್ಲಿ ನಡೆದು ಹೋಗಬೇಕಾಗಿರುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಲ್ಲಿನ ಸಮಸ್ಯೆಯಿಂದ ಗ್ರಾಮಕ್ಕೆ ಯಾರು ಹೆಣ್ಣು ಗಂಡು ಸಂಬಂಧ ಮಾಡಲು ಬರುತ್ತಿಲ್ಲ. ರೇಷನ್ ಕಾರ್ಡನ್ನೇ ನಂಬಿ ಬದುಕುತ್ತಿರುವ ಈ ಗ್ರಾಮಸ್ಥರ ಸ್ಥಿತಿ ಅತ್ಯಂತ ಶೋಚನೀಯ.ಅತ್ತ ಕಂದಾಯ ಭೂಮಿಯೂ ಅಲ್ಲದ ಇತ್ತ ಅರಣ್ಯ ಭೂಮಿಯೂ ಅಲ್ಲದ ತುಂಗಾ ಬ್ಯಾಕ್ ವಾಟರ್ ಬಫರ್ ಏರಿಯಾದಲ್ಲಿ ಬದುಕು ಜೀಕುತ್ತಿರುವ ಗ್ರಾಮಸ್ಥರ ನೋವಿನ ಸಂಗತಿ ಇದು. ಶಿವಮೊಗ್ಗ ಜಿಲ್ಲೆಯ ಗಡಿಗ್ರಾಮವಾಗಿರುವ ಈ ಗ್ರಾಮದ ಚಿತ್ರಣ ಹೇಗಿದೆ ಎಂಬುದರ ಕಂಪ್ಲೀಟ್ ಡಿಟೈಲ್ ಇಲ್ಲಿದೆ.
ತುಂಗಾ ಹಿನ್ನೀರಿನ ನಿಸರ್ಗದ ಸೌಂದರ್ಯದ ಮಡಿಲಿನಲ್ಲಿ ಹೊದ್ದು ನಿಂತಿರುವ ಗ್ರಾಮ ಎಂತವರನ್ನು ಆಕರ್ಷಿಸುತ್ತದೆ.. ಈ ಗ್ರಾಮಕ್ಕೆ ಮೊದಲ ಬಾರಿ ಯಾರೇ ಭೇಟಿ ನೀಡಿದರೂ ಇಲ್ಲಿನ ಸೌಂದರ್ಯಕ್ಕೆ ಬೆರಗಾಗಿ ಹೋಗುತ್ತಾರೆ. ಇಲ್ಲಿ ನೆಲಿಸಿರುವ ಜನರೇ ಧನ್ಯರು ಎಂದು ಉದ್ಗರಿಸುತ್ತಾರೆ. ಆದರೆ ಇಲ್ಲಿನ ಸೌಂದರ್ಯ ಎಷ್ಟು ಶ್ರೀಮಂತವೋ ಇಲ್ಲಿನ ಜನರ ಬವಣೆಗಳು ಕೂಡ ಅಷ್ಟೇ ಬಡವಾಗಿ ಹೋಗಿದೆ. ಶಿವಮೊಗ್ಗದಿಂದ ಕೇವಲ 35 ಕಿಲೋಮೀಟರ್ ದೂರದಲ್ಲಿರುವ ಬೆಳಗಲ್ಲು ಗ್ರಾಮದ ಶೋಚನೀಯ ಪರಿಸ್ಥಿತಿ ಇದು. ಬೆಳಗಲ್ಲು ಗ್ರಾಮದ ಜನರ ಬದುಕನ್ನು ಹತ್ತಿರದಿಂದ ನೋಡಿದಾಗ ಇವರು ನಾಗರೀಕ ಪ್ರಪಂಚದಿಂದ ದೂರ ಉಳಿದಿದ್ದಾರೆ ಎಂಬುದು ಭಾಸವಾಗುತ್ತದೆ. ಅಂತ್ಯೋದಯದ ಕಾರ್ಡಿನಲ್ಲಿ ಬದುಕು ಸಾಗಿಸುತ್ತಿದ್ದ ಇವರಿಗೆ ಈಗ ಬಿಪಿಎಲ್ ಕಾರ್ಡ್ ನೀಡಲಾಗಿದೆ.
ಸರ್ಕಾರದ ಯಾವ ಯೋಜನೆಗಳು ಈ ಗ್ರಾಮಕ್ಕೆ ಸಿಕ್ಕಿಲ್ಲ. ಇಲ್ಲಿನ ಜನರ ಮತಕ್ಕಾಗಿ ಓಟರ್ ಐಡಿ, ಆದಾರ್ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ ಹೊರತು ಪಡಿಸಿದರೆ, ಇವರಿಗೆ ಇನ್ಯಾವ ಸವಲತ್ತುಗಳು ದಕ್ಕಿಲ್ಲ. ಮೊದಲೆನೆಯಾದಿ ಬೆಳಗಲ್ಲು ಎಂಬುದು ಗ್ರಾಮವಾಗಿಯೇ ಅಧಿಕೃತವಾಗಿ ಗುರುತಿಸಿಕೊಂಡಿಲ್ಲ. 1991 ರವರೆಗೆ ಗ್ರಾಮ ಪಂಚಾಯಿತಿಯವರು ಮನೆ ಕಂದಾಯ ಕಟ್ಟಿಸಿಕೊಳ್ಳುತ್ತಿದ್ದರು.
ಯಾವಾಗ ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡರೋ ಜನರು ಅವಾಗ ಬಫರ್ ಏರಿಯಾಕ್ಕೆ ಅಂದರೆ ಮುಳುಗಡೆ ಪ್ರದೇಶದ ಮೇಲಕ್ಕೆ ಸ್ಥಳಾಂತರಗೊಂಡಿದ್ದಾರೆ. ನೂರಾರು ವರ್ಷದಿಂದ ಇದೇ ನೆಲದಲ್ಲಿ ನೆಲೆ ಕಂಡುಕೊಂಡಿರುವ ಗ್ರಾಮಸ್ಥರಿಗೆ ಒಂದು ಆಶ್ರಯ ಮನೆಯನ್ನು ನೀಡಿಲ್ಲ. ಕುಟುಂಬಗಳು ಬೆಳೆದಂತೆ ಮನೆಯಲ್ಲಿ ಸದಸ್ಯರ ಸಂಖ್ಯೆ ಹೆಚ್ಚುತ್ತಿದೆ. ಪಕ್ಕದಲ್ಲಿ ಮನೆ ನಿರ್ಮಿಸಲು ಅರಣ್ಯ ಇಲಾಖೆ ಬಿಡುತ್ತಿಲ್ಲ. ಹೀಗಾಗಿ ಒಂದು ಮನೆಯಲ್ಲಿ ಆರರಿಂದ ಒಂಬತ್ತು ಮಂದಿ ನೆಲೆಸುವಂತಾಗಿದೆ.
ಗ್ರಾಮಕ್ಕೆ ಕುಡಿಯುವ ನೀರು ದಕ್ಕಿಲ್ಲ.. ತುಂಗಾ ನದಿ ನೀರನ್ನೇ ನೇರವಾಗಿ ಸೇವಿಸುವ ಪರಿಸ್ಥಿತಿ ಇವರದ್ದು, ಗ್ರಾಮದಲ್ಲಿ ಎಲ್ಲರೂ ಎಸ್ಸಿ ಸಮುದಾಯವರೇ ಇದ್ದು, ಎಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ. ಗುಂಟೆ ಲೆಕ್ಕದಲ್ಲಿ ಬಗರ್ ಹುಕಂ ಭೂಮಿಯನ್ನು ಉಳಿಮೆ ಮಾಡಿಕೊಂಡು ಕೂಲಿನಾಲಿ ಮಾಡಿ, ಜೀವನ ಸಾಗಿಸುತ್ತಿದ್ದಾರೆ. ಇನ್ನು ಕೆಲವರು, ಕೇವಲ ರೇಷನ್ ಕಾರ್ಡ್ ನ ಪಡಿತರದಿಂದಲೇ ಜೀವನ ಸಾಗಿಸುತ್ತಿದ್ದಾರೆ.
ಗ್ರಾಮದ ಜನಸಂಖ್ಯೆ 80 ರ ಗಡಿಯನ್ನು ದಾಟಿಲ್ಲ ಈ ಗ್ರಾಮದಲ್ಲಿ ಕೆಲವೇ ಕೆಲವು ವಿದ್ಯಾರ್ಥಿಗಳು ವಿದ್ಯಾವಂತರಾಗಿದ್ದಾರೆ ಇನ್ನು ಕೆಲವು ವಿದ್ಯಾರ್ಥಿಗಳು ದುರ್ಗಮ ಕಾಡಿನಲ್ಲಿ ನಾಲ್ಕು ಕಿಲೋಮೀಟರ್ ನಡೆದು ಸಾಗಲು ಹಿಂದೇಟು ಹಾಕಿ ಶಾಲೆಯನ್ನು ತೊರೆದಿದ್ದಾರೆ. ಈ ಹಿಂದೆ ಕಿಮ್ಮನೆ ರತ್ನಾಕರ್ ಅವಧಿಯಲ್ಲಿ ಈ ಗ್ರಾಮಕ್ಕೆ ಮಾನವೀಯತೆ ಅಡಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇದೊಂದು ಬೆಳಕು ಇವರನ್ನು ಕತ್ತಲಿನಿಂದ ದೂರವಾಗಿಸಿದೆ.
1991 ರವೆಗೆ ಇಲ್ಲಿನ ಕೆಲವು ಗ್ರಾಮಸ್ಥರು ಮನೆ ಕಂದಾಯ ಕಟ್ಟಿದ್ದಾರೆ. ಆದರೆ ಬಿಳಿಗಲ್ಲು ಕಂದಾಯ ಗ್ರಾಮವಾಗಿ ಗುರುತಿಸಿಕೊಂಡಿಲ್ಲ. ತದನಂತರದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆ ವ್ಯಾಪ್ತಿಯ ಗೊಂದಲ ಗ್ರಾಮಸ್ಥರ ಬದುಕನ್ನು ಹೈರಾಣಗಿಸಿದೆ ಹೀಗಾಗಿ ಗ್ರಾಮಕ್ಕೆ ಯಾವುದೇ ಮೂಲಭೂತ ಸೌಕರ್ಯಗಳು ಇಂದಿಗೂ ಒದಗಿ ಬಂದಿಲ್ಲ ಗ್ರಾಮದಲ್ಲಿ ಯಾರಿಗೂ ಕೂಡ ಸ್ವಂತ ಸೂರಿಲ್ಲ ಬಹುತೇಕ ಜನರು ಗುಡಿಸಿನಲ್ಲೇ ಮಣ್ಣಿನ ನೆಲದಲ್ಲಿಯೇ ಇಂದಿಗೂ ಬದುಕನ್ನು ಸಾಗಿಸುತ್ತಿದ್ದಾರೆ ಕುಡಿಯುವ ನೀರಿನ ಸೌಲಭ್ಯವಿಲ್ಲ ರಸ್ತೆ ಚರಂಡಿ ವ್ಯವಸ್ಥೆ ಇಲ್ಲ ದುರ್ಗಮ ಕಾಡಿನ ಪರಿಸರದಲ್ಲಿ ಸುಮಾರು ನಾಲ್ಕು ಕಿಲೋಮೀಟರ್ ನಡೆದೇ ಶಾಲೆಗೆ ಹಾಗೂ ನಿತ್ಯದ ಕೆಲಸ ಕಾರ್ಯಗಳಿಗೆ ಹೋಗುವ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ
ಈ ಗ್ರಾಮದಲ್ಲಿ ಕೇವಲ ಒಬ್ಬ ವಿದ್ಯಾರ್ಥಿನಿ ಮಾತ್ರ ಬಿಎಸ್ಸಿ ಪದವಿಯನ್ನು ಮುಗಿಸಿ ಮನೆಯಲ್ಲಿಯೇ ಇದ್ದಾಳೆ ಕೆಲಸಕ್ಕೆ ಹೋಗಲು ಕೂಡ ಹಣಕಾಸಿನ ತೊಂದರೆ ಇರುವುದು ಇದಕ್ಕೆ ಕಾರಣವಾಗಿದೆ ಗ್ರಾಮದಲ್ಲಿ ಸುಮಾರು 20 ಮಕ್ಕಳಿದ್ದರೂ ಒಂದು ಅಂಗನವಾಡಿ ಕೇಂದ್ರವಿಲ್ಲ. ಇನ್ನು ಗ್ರಾಮದಲ್ಲಿನ ಜ್ವಲಂತ ಸಮಸ್ಯೆಗಳಿಂದ ನಾಲ್ಕೈದು ಕುಟುಂಬಗಳು ಗ್ರಾಮ ತೊರೆದು ಬೇರೆಡೆ ಹೋಗಿದೆ. ಗ್ರಾಮದ ಸಮಸ್ಯೆಯಿಂದಾಗಿ ಇಲ್ಲಿನ ಯುವಕ ಯುವತಿಯರಿಗೆ ಹೊರಗಿನ ಸಂಬಂಧಗಳೇ ಕೂಡಿ ಬರುತ್ತಿಲ್ಲ. ಹೀಗಾಗಿ ಸಂಬಂಧಿಗಳನ್ನೇ ಅನಿವಾರ್ಯವಾಗಿ ಮದುವೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಮಾನವೀಯತೆ ಅಡಿ ಇಲ್ಲಿನ ಜನರಿಗೆ ಮೂಲಭೂತ ಸೌಕರ್ಯ ಹಾಗು ಸರ್ಕಾರದ ಯೋಜನೆಗಳ ನೆರವನ್ನು ನೀಡಬೇಕಿದೆ.