ಗೊಂಡಾ: ಏಳು ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ಭೂಷಣ್ ಶರಣ್ ಸಿಂಗ್(Brij Bhushan) ತಾವು ಯಾವುದೇ ತನಿಖೆಗೂ ಸಿದ್ಧ ಎಂದಿದ್ದಾರೆ. ಇಲ್ಲಿಗೆ 40 ಕಿ.ಮೀ. ದೂರದಲ್ಲಿರುವ ಬಿಷ್ಣೋಹರ್ಪುರ್ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
‘ರಾಜೀನಾಮೆ ನೀಡುವುದು ದೊಡ್ಡ ವಿಷಯವೇ ಇಲ್ಲ. ಆದರೆ ನಾನು ರಾಜೀನಾಮೆ ನೀಡುವುದಿಲ್ಲ. ಹಾಗೆ ಮಾಡಿದರೆ ತಪ್ಪು ಒಪ್ಪುಕೊಂಡಂತಾಗುತ್ತದೆ. ನಾನು ಮುಗ್ಧ, ಸುಪ್ರೀಂ ಕೋರ್ಚ್ ಹಾಗೂ ದೆಹಲಿ ಪೊಲೀಸರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ನಾನು ಯಾವುದೇ ತನಿಖೆಗೂ ಸಿದ್ಧ. ಡಬ್ಲ್ಯುಎಫ್ಐ ಅಧ್ಯಕ್ಷನಾಗಿ ನನ್ನ ಅವಧಿ ಮುಗಿದಿದೆ. 45 ದಿನಗಳಲ್ಲಿ ಹೊಸದಾಗಿ ಚುನಾವಣೆ ನಡೆಯಲಿದೆ’ ಎಂದರು.
ಕಾಂಗ್ರೆಸ್ ವಿರುದ್ಧ ಕಿಡಿ: ಕುಸ್ತಿಪಟುಗಳ ಪ್ರತಿಭಟನಾ ಸ್ಥಳಕ್ಕೆ ಪ್ರಿಯಾಂಕ ಗಾಂಧಿ ಭೇಟಿ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಬ್ರಿಜ್ ಭೂಷಣ್, ‘ಈ ವಿವಾದದ ಹಿಂದೆ ಯಾರಿದ್ದಾರೆ ಎನ್ನುವುದು ಇಂದು ಸ್ಪಷ್ಟವಾಗಿದೆ. ನಾನು ಆರಂಭದಿಂದಲೇ ಈ ಬಗ್ಗೆ ಹೇಳುತ್ತಿದ್ದೇನೆ. ಉದ್ಯಮಿ ಹಾಗೂ ಕಾಂಗ್ರೆಸ್ನ ಕೈವಾಡವಿದೆ ಎಂದು. ನನ್ನ ಮೇಲೆ ಅವರಿಗೆ ಸಿಟ್ಟಿದೆ’ ಎಂದರು. ಆದರೆ ಬಿಜೆಪಿ ಸಂಸದರೂ ಆಗಿರುವ ಭೂಷಣ್ ಈ ಬಗ್ಗೆ ಹೆಚ್ಚಿನ ವಿವರ ಬಹಿರಂಗಪಡಿಸಲಿಲ್ಲ.
ಕುಸ್ತಿಪಟುಗಳ ಮೇಲೆ ಸಿಟ್ಟು: ದೂರು ನೀಡಿರುವ 7 ಕುಸ್ತಿಪಟುಗಳ ಪೈಕಿ ಒಬ್ಬ ಅಪ್ರಾಪ್ತೆಯೂ ಇರುವ ಕಾರಣ ಶುಕ್ರವಾರ ರಾತ್ರಿ ದೆಹಲಿ ಪೊಲೀಸರು ಬ್ರಿಜ್ಭೂಷಣ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದರು. ಮಹಿಳೆಯರ ಮೇಲೆ ಹಲ್ಲೆ, ಬೆದರಿಕೆಗೆ ಸಂಬಂಧಿಸಿದಂತೆ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಭೂಷಣ್, ‘ನನ್ನ ವಿರುದ್ಧ ಎಫ್ಐಆರ್ ಆದ ಮೇಲೂ ಏಕೆ ಪ್ರತಿಭಟನೆ ಮುಂದುವರಿಸಿದ್ದಾರೆ?, ಕುಸ್ತಿಪಟುಗಳು ದಿನಕ್ಕೊಂದು ಹೊಸ ಬೇಡಿಕೆ ಇಡುತ್ತಿದ್ದಾರೆ. ಮೊದಲು ನನ್ನ ಮೇಲೆ ಎಫ್ಐಆರ್ಗೆ ಆಗ್ರಹಿಸಿದರು. ಎಫ್ಐಆರ್ ಆಗಿದೆ. ಈಗ ನನ್ನನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎನ್ನುತ್ತಿದ್ದಾರೆ. ನಾನು ಕಿರುಕುಳ ನೀಡಿದ್ದೇ ಆಗಿದ್ದರೆ ಏಕೆ ಇಷ್ಟುದಿನ ಪೊಲೀಸರಿಗೆ ದೂರು ನೀಡಲಿಲ್ಲ. ನೇರವಾಗಿ ಜಂತರ್ ಮಂತರ್ಗೆ ಹೋಗಿ ಪ್ರತಿಭಟನೆ ಏಕೆ ನಡೆಸಿದರು?’ ಎಂದರು ಪ್ರಶ್ನಿಸಿದರು.