ಬೆಂಗಳೂರು: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಎಐಸಿಸಿ (AICC) ಅಧಿಕೃತವಾಗಿ ತಿಳಿಸಿದೆ. ಇದೀಗ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಬೆಳಗಾವಿ ಕಾಂಗ್ರೆಸ್ ಶಾಸಕರು ಲಾಭಿ ನಡೆಸಿದ್ದಾರೆ.
ಬೆಂಗಳೂರಲ್ಲೇ ಬೀಡು ಬಿಟ್ಟಿರುವ ಬೆಳಗಾವಿ ಕಾಂಗ್ರೆಸ್ ನಾಯಕರು ಸಚಿವ ಸ್ಥಾನ ಪಡೆದೇ ಬೆಳಗಾವಿಗೆ ಹೋಗೋಣವೆಂದು ಕಸರತ್ತು ನಡೆಸಿದ್ದಾರೆ. ಜಿಲ್ಲೆಯ 18 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದು, ಈ ಪೈಕಿ ಸತೀಶ್ ಜಾರಕಿಹೊಳಿ, ಲಕ್ಷ್ಮಣ್ ಸವದಿ, ಲಕ್ಷ್ಮೀ ಹೆಬ್ಬಾಳ್ಕರ್, ಪ್ರಕಾಶ್ ಹುಕ್ಕೇರಿ ಅಥವಾ ಗಣೇಶ್ ಹುಕ್ಕೇರಿ, ಅಶೋಕ್ ಪಟ್ಟಣ್, ಮಹಾಂತೇಶ ಕೌಜಲಗಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಗೆ ಮಂತ್ರಿ ಸ್ಥಾನ ಬಹುತೇಕ ಫಿಕ್ಸ್
ಬಿಜೆಪಿ ಭದ್ರಕೋಟೆಯಾಗಿದ್ದ ಬೆಳಗಾವಿಯಲ್ಲಿ ಈಗ ಕಾಂಗ್ರೆಸ್ ಪಾರುಪತ್ಯ ಶುರುವಾಗಿದೆ. ಇನ್ನು ಸಿದ್ದರಾಮಯ್ಯ ಶಿಷ್ಯ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಗೆ ಮಂತ್ರಿ ಸ್ಥಾನ ಬಹುತೇಕ ಫಿಕ್ಸ್ ಎನ್ನಲಾಗಿದೆ. ಆದ್ರೆ, ಸತೀಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ನೀಡುವಂತೆ ಬೆಳಗಾವಿಯಲ್ಲಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಸದ್ಯ ಲಿಂಗಾಯತ 7, ಎಸ್ಸಿ 1, ಬ್ರಾಹ್ಮಣ1, ಎಸ್ಟಿ 1, ಮುಸ್ಲಿಂ 1 ಸೇರಿ 11 ಕೈ ಶಾಸಕರು, ಇಬ್ಬರು ಎಂಎಲ್ಸಿಗಳು ಇದ್ದು, ಲಿಂಗಾಯತ ನಾಯಕರ ಮಧ್ಯೆಯೇ ಸಚಿವರಾಗಲು ಹೆಚ್ಚಿನ ಪೈಪೋಟಿ ನಡೆಯುತ್ತಿದೆ.
ಐವರು ಲಿಂಗಾಯತ ಶಾಸಕರ ಮಧ್ಯೆ ಸಚಿವ ಸ್ಥಾನಕ್ಕೆ ಹೆಚ್ಚಿನ ಪೈಪೋಟಿ
ಐವರು ಲಿಂಗಾಯತ ಶಾಸಕರ ಮಧ್ಯೆ ಸಚಿವ ಸ್ಥಾನಕ್ಕೆ ಹೆಚ್ಚಿನ ಪೈಪೋಟಿ ಶುರುವಾಗಿದೆ. ಹೌದು ಲಕ್ಷ್ಮೀ ಹೆಬ್ಬಾಳ್ಕರ್, ಲಕ್ಷ್ಮಣ್ ಸವದಿ, ಪ್ರಕಾಶ್ ಹುಕ್ಕೇರಿ, ಮಹಾಂತೇಶ ಕೌಜಲಗಿ, ಅಶೋಕ ಪಟ್ಟಣ್ ಮಧ್ಯೆ ಸಚಿವ ಸ್ಥಾನಕ್ಕೆ ಫೈಟ್ ಶುರುವಾಗಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಅಥಣಿ ಜೊತೆ ಕಾಗವಾಡ, ಕುಡಚಿಯಲ್ಲಿ ಕಾಂಗ್ರೆಸ್ ಗೆಲುವಿಗೆ ಪ್ರಮುಖ ಪಾತ್ರ ವಹಿಸಿರುವ ಲಕ್ಷ್ಮಣ್ ಸವದಿ ಪ್ರಬಲ ಹುದ್ದೆ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಇನ್ನು ರಮೇಶ್ ಜಾರಕಿಹೊಳಿಗೆ ಸೆಡ್ಡು ಹೊಡೆದು ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲಿ ಜಯ ಸಾಧಿಸಿರುವ ಲಕ್ಷ್ಮೀ ಹೆಬ್ಬಾಳ್ಕರ್ ಮಹಿಳಾ ಕೋಟಾದಡಿ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದಾರೆ.
ಜೊತೆಗೆ ಸತತ ಮೂರು ಬಾರಿ ಚಿಕ್ಕೋಡಿಯಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಎಂಎಲ್ಸಿ ಪ್ರಕಾಶ್ ಹುಕ್ಕೇರಿ ತಮಗೆ ಇಲ್ಲವೇ, ತಮ್ಮ ಮಗ ಗಣೇಶ್ ಹುಕ್ಕೇರಿಗೆ ಸಚಿವ ಸ್ಥಾನ ನೀಡಲು ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಮನವಿ ಕೂಡ ಮಾಡಿದ್ದಾರೆ. ಇನ್ನು 2013ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸ್ಥಾನ ತ್ಯಜಿಸಿ ಲೋಕಸಭೆಗೆ ಸ್ಪರ್ಧಿಸಿದ್ದರು.
ಹೀಗಾಗಿ ಈ ಬಾರಿ ತಮಗೆ ಇಲ್ಲ ತಮ್ಮ ಮಗನಿಗೆ ಸಚಿವ ಸ್ಥಾನ ನೀಡಲು ಪ್ರಕಾಶ್ ಹುಕ್ಕೇರಿ ಬೇಡಿಕೆ ಇಟ್ಟಿದ್ದಾರೆ. ಮತ್ತೊಂದೆಡೆ ಮೂರನೇ ಬಾರಿ ಶಾಸಕರಾಗಿರುವ ರಾಮದುರ್ಗ ಕಾಂಗ್ರೆಸ್ ಶಾಸಕ ಹಾಗೂ ಸಿದ್ದರಾಮಯ್ಯ ಆಪ್ತ ಅಶೋಕ್ ಪಟ್ಟಣ್ ಬೈಲಹೊಂಗಲ ಕಾಂಗ್ರೆಸ್ ಶಾಸಕ ಮಹಾಂತೇಶ ಕೌಜಲಗಿ ಸಹ ಸಚಿವ ಸ್ಥಾನದ ರೇಸ್ನಲ್ಲಿದ್ದಾರೆ. ಈ ನಡುವೆ ಬೆಳಗಾವಿ ಜಿಲ್ಲೆಗೆ ಕನಿಷ್ಠ ಮೂರು ಮಂತ್ರಿ ಸ್ಥಾನ ಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕೇಳಿದ್ದಾರೆ. ಒಟ್ಟಿನಲ್ಲಿ ಐವರು ಲಿಂಗಾಯತ ಶಾಸಕರ ಪೈಕಿ ಯಾರಿಗೆ ಸಿಗುತ್ತೆ ಮಂತ್ರಿ ಭಾಗ್ಯ ಕಾದುನೋಡಬೇಕಿದೆ.