ಬೆಂಗಳೂರು:- ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧಿಗಳ ತೀವ್ರ ಕೊರತೆ ಇದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸರ್ಕಾರವು ಉಚಿತವಾಗಿ ಪೂರೈಸುವ ಒಟ್ಟು 410 ಅಗತ್ಯ ಔಷಧಿಗಳ ಪೈಕಿ 190 ಅಗತ್ಯ ಔಷಧಿಗಳ ದಾಸ್ತಾನು ಇಲ್ಲ. ಏಪ್ರಿಲ್ ಒಂದರೊಳಗೆ ಪೂರೈಕೆಯನ್ನು ಸುವ್ಯವಸ್ಥಿತಗೊಳಿಸುವ ಸಾಧ್ಯತೆಯಿದೆ ಎಂದು ಅವರು ಭರವಸೆ ನೀಡಿದರು. ಸರ್ಕಾರವು “ಪ್ರಾಥಮಿಕ ಜವಾಬ್ದಾರಿಯಲ್ಲಿ ವಿಫಲವಾಗಿದೆ” ಎಂದು ಒಪ್ಪಿಕೊಂಡರು.
ಸಾರ್ವಜನಿಕ ಪೂರೈಕೆಗಾಗಿ ಸರ್ಕಾರವು ಒಟ್ಟು ಔಷಧಿಗಳಲ್ಲಿ 410 “ಅಗತ್ಯ ಔಷಧಿಗಳು” ಮತ್ತು 322 “ಅಪೇಕ್ಷಣೀಯ ಔಷಧಿಗಳ” ಅನ್ನು ಖರೀದಿಸುತ್ತದೆ. ಟೆಂಡರ್ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ ಪೂರೈಕೆಯಲ್ಲಿ ತೊಂದರೆಯಾಗಿದೆ. ಲಭ್ಯವಿರುವ ಸುಮಾರು 222 ಕೋಟಿ ರೂ. ಹಣದಿಂದ ಔಷಧಿಗಳನ್ನು ಖರೀದಿಸಿ ಸಾರ್ವಜನಿಕರಿಗೆ ಪೂರೈಸುತ್ತೇವೆ ಎಂದರು.
ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವನ್ನು (ಕೆಎಸ್ಎಂಎಸ್ಸಿ) ಬಲಪಡಿಸಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿ ದೊರೆಯದ ಕಾರಣ ಔಷಧಾಲಯಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ ಎಂದು ತಿಳಿಸಿದರು.
ಔಷಧಿಗಳ ಕೊರತೆ ಆಗದಂತೆ ನಿರಂತವಾಗಿ ಪೂರೈಕೆಯಾಗಲು ಎರಡು ವರ್ಷದ ಅವಧಿಗೆ ಟೆಂಡರ್ ನೀಡಲು ಉದ್ದೇಶಿಸಲಾಗಿದೆ. ರಾಜ್ಯಾದ್ಯಂತ ಔಷಧಗಳ ಸುಗಮ ಪೂರೈಕೆ ವ್ಯವಸ್ಥೆಯನ್ನು ಇನ್ನಷ್ಟು ಸದೃಢ ಮಾಡಲಾಗುವುದು. ಆಸ್ಪತ್ರೆಗಳಲ್ಲಿನ ವೈದ್ಯಕೀಯ ಉಪಕರಣಗಳ ಸಂಖ್ಯೆ, ಅವು ಕಾರ್ಯನಿರ್ವಹಿಸುತ್ತಿವೆಯೇ ಅಥವಾ ಇಲ್ಲವೇ ಅಥವಾ ಅದರ ನಿರ್ವಹಣೆಯ ಬಗ್ಗೆ ಸರ್ಕಾರದ ಬಳಿ ಮಾಹಿತಿ ಇಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಸಿ-ಡಾಕ್ ಕಂಪನಿಗೆ ವರದಿ ನೀಡುವಂತೆ ತಿಳಿಸಲಾಗಿದೆ
ಪ್ರತಿ ಮೂರ್ನಾಲ್ಕು ತಿಂಗಳಿಗೊಮ್ಮೆ ವ್ಯವಸ್ಥಾಪಕ ನಿರ್ದೇಶಕರು ಬದಲಾಗುತ್ತಿರುವುದರಿಂದ ಕೆಎಸ್ಎಂಎಸ್ಸಿಯನ್ನು ಸುಧಾರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.