ಲಕ್ನೋ: ಕಲಿಕೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಉತ್ತರ ಪ್ರದೇಶದ(Uttar Pradesh) ಇಬ್ಬರು ಮಾಜಿ ಶಾಸಕರು 50ರ ಹರೆಯದಲ್ಲೂ 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ(Class 12 Board Exam) ಉತ್ತೀರ್ಣರಾಗಿದ್ದಾರೆ. ಅಲ್ಲದೇ ಪದವಿ ಕೋರ್ಸ್ ತೆಗೆದುಕೊಳ್ಳುವ ಗುರಿಯನ್ನೂ ಹೊಂದಿದ್ದಾರೆ. ಬರೇಲಿ ಜಿಲ್ಲೆಯ ಬಿತ್ರಿ-ಚೈನ್ಪುರ ಕ್ಷೇತ್ರದ ಮಾಜಿ ಶಾಸಕ ರಾಜೇಶ್ ಮಿಶ್ರಾ (Former MLA Rajesh Mishra) 500ಕ್ಕೆ 263 ಅಂಕಗಳನ್ನು ಪಡೆದರೆ, ಹಸ್ತಿನಾಪುರದಿಂದ ಎರಡು ಬಾರಿ ಶಾಸಕರಾಗಿದ್ದ ಪ್ರಭುದಯಾಳ್ ವಾಲ್ಮೀಕಿ (Forme MLA Prabhudayal Valmiki)ಅವರು ಸಹ ಉತ್ತೀರ್ಣರಾಗಿದ್ದಾರೆ.
ಉತ್ತರ ಪ್ರದೇಶ ಬಿಜೆಪಿಯ ಮಾಜಿ ಶಾಸಕ ರಾಜೇಶ್ ಮಿಶ್ರಾ (Former MLA Rajesh Mishra)ಅವರು 55ನೇ ವಯಸ್ಸಿನಲ್ಲಿ 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 500ರಲ್ಲಿ 263 ಅಂಕಗಳನ್ನು ಗಳಿಸುವ ಮೂಲಕ ತೇರ್ಗಡೆ ಹೊಂದಿದ್ದಾರೆ. 2017 ರಿಂದ 2022 ರವರೆಗೆ ಅಸೆಂಬ್ಲಿಯಲ್ಲಿ ಬರೇಲಿ ಜಿಲ್ಲೆಯ ಬಿತ್ರಿ-ಚೈನ್ಪುರ್ ಸ್ಥಾನವನ್ನು ಪ್ರತಿನಿಧಿಸಿದ್ದ ಮಿಶ್ರಾ, ಈಗ ಬಡವರಿಗೆ ಸಹಾಯ ಮಾಡಲು ಕಾನೂನಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ಯೋಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ 12ನೇ ತರಗತಿಯ ಪರೀಕ್ಷೆಯನ್ನು ಬರೆದಿದ್ದರು.
ಇದೀಗ 12ನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದು, ಹಿಂದಿಯಲ್ಲಿ 57, ಸಿವಿಕ್ಸ್ನಲ್ಲಿ 47, ಶಿಕ್ಷಣದಲ್ಲಿ 42, ಡ್ರಾಯಿಂಗ್ನಲ್ಲಿ 36 ಮತ್ತು ಸಮಾಜಶಾಸ್ತ್ರದಲ್ಲಿ 81 ಅಂಕಗಳನ್ನು ಪಡೆಯುವ ಮೂಲಕ ತೇರ್ಗಡೆಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಬಿಜೆಪಿಯ ಮಾಜಿ ಶಾಸಕ , ಡ್ರಾಯಿಂಗ್, ಸಿವಿಕ್ಸ್ ಮತ್ತು ಶಿಕ್ಷಣದಲ್ಲಿ ನಾನು ಪಡೆದ ಅಂಕಗಳಿಂದ ತೃಪ್ತಿ ಹೊಂದಿಲ್ಲ. ನಾನು ಉತ್ತರ ಪತ್ರಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತೇನೆ ಎಂದು ತಿಳಿಸಿದರು.
ಎರಡು ವರ್ಷಗಳ ಹಿಂದೆ, ನಾನು 10ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ತೇರ್ಗಡೆ ಹೊಂದಿದ್ದೇನೆ. ಈಗ ನಾನು 12ನೇ ತರಗತಿ ಪರೀಕ್ಷೆಯಲ್ಲಿಯೂ ಉತ್ತೀರ್ಣನಾಗಿದ್ದೇನೆ. ಈಗ, ನಾನು ಎಲ್ಎಲ್ಬಿಯನ್ನು ಮುಂದುವರಿಸಲು ಬಯಸುತ್ತೇನೆ. ಇದರಿಂದ ಬಡವರಿಗೆ ನ್ಯಾಯ ಪಡೆಯಲು ನಾನು ಸಹಾಯ ಮಾಡುತ್ತೇನೆ ಎಂದು ಹೇಳಿದರು. ನಾನು ಶಾಸಕನಾಗಿದ್ದಾಗ, ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗದ ಜನರು ಉತ್ತಮ ವಕೀಲರ ಸೇವೆಯನ್ನು ಪಡೆಯಲು ಸಾಧ್ಯವಾಗದ್ದನ್ನು ಗಮನಿಸಿದ್ದೆ. ಇದರಿಂದಾಗಿ ಅವರಿಗೆ ನ್ಯಾಯ ಸಿಗುವುದಿಲ್ಲ ಎಂದು ನಾನು ಅರಿತುಕೊಂಡೆ. ಈ ಹಿನ್ನೆಲೆಯಲ್ಲಿ ನಾನು ವಕೀಲನಾಗುತ್ತೇನೆ ಎಂದ ಅವರು, ಬೋರ್ಡ್ ಪರೀಕ್ಷೆಗಳಲ್ಲಿ ಯಾವುದೇ ನಕಲು ನಡೆದಿಲ್ಲ ಮತ್ತು ತಪಾಸಣೆ ಕಟ್ಟುನಿಟ್ಟಾಗಿದೆ ಎಂದು ಈ ವೇಳೆ ತಿಳಿಸಿದರು.