ಬೆಂಗಳೂರು: ರಾಜ್ಯದ ಜನರ ಹಿತ ಕಾಯಲು ನಾನು ಯಾವುದೇ ಹೋರಾಟಕ್ಕೂ ಸಿದ್ಧನಿದ್ದೇನೆ. ಕನ್ನಡಿಗರಿಗೆ ಅನ್ಯಾಯ ಆಗಿದೆ ಎಂದು ಮಾತನಾಡಿದರೆ ಅದನ್ನು ಬಿಜೆಪಿಯವರು ತಿರುಚಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ರಾಜ್ಯದ ಹಿತ ಕಾಯಲು ನಾನು ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ ಎಂದು ಸಂಸದ ಡಿಕೆ ಸುರೇಶ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ಹೊರವಲಯದ ಬನ್ನೇರುಘಟ್ಟದಲ್ಲಿ ಕಾವೇರಿ ಕುಡಿಯುವ ನೀರಿನ ಯೋಜನೆಯ ಪೈಪ್ಲೈನ್ ಕಾಮಗಾರಿ ವೇಳೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡಿಗರಿಗೆ ಅನ್ಯಾಯ ಆಗಿದೆ ಎಂದು ನಾನು ಮಾತನಾಡಿದ್ದೆ. ಉತ್ತರ ಪ್ರದೇಶಕ್ಕೆ 33% ರಷ್ಟು ಹಣವನ್ನು ನೀಡುತ್ತಿದ್ದಾರೆ.
ನಮ್ಮ ರಾಜ್ಯಕ್ಕೆ ತೆರಿಗೆಯ ಹಣವನ್ನು ವಾಪಸ್ ಕೊಡಿ ಎಂದು ಪ್ರಶ್ನೆ ಮಾಡಿದ್ದು ಹೇಗೆ ತಪ್ಪಾಗುತ್ತದೆ? ರಾಜ್ಯದಲ್ಲಿ ಬರಗಾಲ ತಾಂಡವ ಆಡುತ್ತಿದೆ. 224 ತಾಲೂಕು ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಆಗಿದೆ. ಆದರೂ ಸಹ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ನಾನು ಮಾತನಾಡಿದ್ದೇನೆ. ಅದರಲ್ಲಿ ಯಾವುದೇ ಹಿಂಪಡೆಯುವ ಪ್ರಶ್ನೆ ಇಲ್ಲ. ನಾಡಿನ ಹಿತಕ್ಕೋಸ್ಕರ ನನ್ನ ಹೋರಾಟ ಎಂದರು.