ನವದೆಹಲಿ: ಕರ್ನಾಟಕವೂ ಸೇರಿ ಹಲವಾರು ರಾಜ್ಯಗಳು ನವೀಕರಿಸಬಹುದಾದ ಇಂಧನ ಶಕ್ತಿಯನ್ನು ಕಡೆಗಣಿಸುತ್ತಿವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಬೇಸರ ಹೊರಹಾಕಿದರು. ಭಾಷಣ ಮಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಈ ಕ್ಷೇತ್ರವನ್ನು ಕರ್ನಾಟಕವೂ ಸೇರಿ ಹಲವಾರು ರಾಜ್ಯಗಳು ಕಡೆಗಣಿಸುತ್ತಿವೆ ಎಂದರು. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದೆ ಕರ್ನಾಟಕ ರಾಜ್ಯವು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ನಾಯಕತ್ವ ನೀಡಿತ್ತು. ಈ ಕ್ಷೇತ್ರದಲ್ಲಿ ಗಣನೀಯ ದಾಪುಗಾಲು ಇರಿಸಿತ್ತು. ಆದರೆ ಕೆಲ ವರ್ಷಗಳಿಂದ ಈಚೆಗೆ ಕರ್ನಾಟಕದಲ್ಲಿ ಈ ಕ್ಷೇತ್ರ ಗಣನೀಯವಾಗಿ ಹಿನ್ನೆಡೆ ಅನುಭವಿಸಿದೆ. ನಮ್ಮ ದೇಶದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದ ಬೆಳವಣಿಗೆ ಪ್ರಮಾಣ ಶೇ.14ರಷ್ಟು ಇದ್ದು, ಕರ್ನಾಟಕ ರಾಜ್ಯದಲ್ಲಿ ಆ ಪ್ರಮಾಣ ಶೇ.2.58ರಷ್ಟು ಇದೆ. ಈ ಸಂದರ್ಭದಲ್ಲಿ ಈ ಕ್ಷೇತ್ರದ ಬೆಳವಣಿಗೆಯ ದರ ಕುಂಠಿತವಾಗಿರುವ ಬಗ್ಗೆ ಎಲ್ಲರೂ ಗಂಭೀರ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಸಾಧನೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಯವೈಖರಿ ಬಗ್ಗೆ ದೇವೇಗೌಡರು ಮೆಚ್ಚುಗೆ ಮಾತುಗಳನ್ನಾಡಿದರು. ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕ್ರಾಂತಿಕಾರಕ ಅಭಿವೃದ್ಧಿ ಆಗಿದೆ. ಈ ಸರ್ಕಾರದ ವಿರುದ್ಧ ಕಳೆದ 10 ವರ್ಷಗಳಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪ ಇಲ್ಲ ಎಂಬುದನ್ನು ನಾವು ಗಮನಿಸಬೇಕು ಎಂದು ಅವರು ಹೇಳಿದರು.