ಬೆಂಗಳೂರು:- ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹ ಕೇಳಿ ಬಂದಿದೆ.
ಈ ಕುರಿತು ಮಾತನಾಡಿದ ಉಗ್ರಪ್ಪ, ಕೋಮು ಗಲಭೆ ಸಂದರ್ಭದಲ್ಲಿ 5 ತಿಂಗಳ ಗರ್ಭಿಣಿಯಾಗಿದ್ದಾಗ ಬಿಲ್ಕಿಸ್ ಬಾನು ಅವರ ಮೇಲೆ ಈ 11 ಅಪರಾಧಿಗಳು ಸಾಮೂಹಿಕ ಅತ್ಯಾಚಾರ ಮಾಡಿದ್ದು, 2 ತಿಂಗಳ ಮಗು ಸೇರಿದಂತೆ ಆಕೆಯ ಕುಟುಂಬದ 7 ಜನರನ್ನು ಹತ್ಯೆ ಮಾಡಿದ್ದರು. ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಮುಂಬೈ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು. 2008ರಲ್ಲಿ ಈ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತು. ಇವರನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಬೇಕು ಎಂದು ರಾಧೆ ಶಾಮ್ ಭಗವಾನ್ ಶಾ ಎಂಬುವವರು ಕ್ಷಮೆಧಾನ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಗೆ ಸಲ್ಲಿಸಿದ್ದರು. ಇದನ್ನು ನ್ಯಾಯಾಲಯ ವಜಾ ಮಾಡಿರುತ್ತದೆ. ಈ ವಿಚಾರವನ್ನು ಮರೆಮಾಚಿ ಸುಪ್ರೀಂ ಕೋರ್ಟಿಗೆ ಅರ್ಜಿ ಹಾಕಲಾಗುತ್ತದೆ. ಈ ಅಪರಾಧಿಗಳನ್ನು ಕ್ಷಮೆ ನೀಡಬೇಕಾದ ಅಧಿಕಾರ ಈ ಪ್ರಕರಣದ ತನಿಖೆ ನಡೆದ ರಾಜ್ಯದಲ್ಲಿ. ಈ ಪ್ರಕರಣದ ವಿಚಾರಣೆಯನ್ನು ಬಾಂಬೆ ವಿಶೇಷ ನ್ಯಾಯಾಲಯ ವಿಚಾರಣೆ ಮಾಡಿತ್ತು. ಹೀಗಾಗಿ ಈ ಅಪರಾಧಿಗಳಿಗೆ ಕ್ಷಮಾಧಾನ ನೀಡುವ ಅಧಿಕಾರ ಕೇವಲ ಮಹಾರಾಷ್ಟ್ರ ಸರ್ಕಾರಕ್ಕೆ ಮಾತ್ರ ಇತ್ತು.
ಕೇಂದ್ರ ಹಾಗೂ ಗುಜರಾತ್ ಸರ್ಕಾರ ಈ ವಿಚಾರದಲ್ಲಿ ಅಪರಾಧಿಗಳ ಜತೆ ಶಾಮೀಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇಷ್ಟಾದರೂ ಅವರು ಯಾವ ಮುಖ ಇಟ್ಟುಕೊಂಡು ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆ. ಗುಜರಾತಿನಲ್ಲಿ ನ್ಯಾಯಾಂಗ ವ್ಯವಸ್ಥೆ ನಾಶವಾಗಿದ್ದು, ಅವರ ಇಷ್ಟಾನುಸಾರ ಕಾನೂನನ್ನು ತಮ್ಮ ಕೈಗೆತೆಗೆದುಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಈ ಅಪರಾಧಿಗಳ ರಕ್ಷಣೆಗೆ ಮುಂದಾಗಿರುವ ಗುಜರಾತ್ ಸರ್ಕಾರವನ್ನು ವಜಾಗೊಳಿಸಲು ಕೇಂದ್ರ ಸರ್ಕಾರ ಹಾಗೂ ಗುಜರಾತ್ ರಾಜ್ಯಪಾಲರು ಶಿಫಾರಸ್ಸು ಮಾಡಬೇಕು. ಈ ಶಿಫಾರಸ್ಸನ್ನು ರಾಷ್ಟ್ರಪತಿಗಳು ಅನುಮೋದಿಸಿ ಗುಜರಾತ್ ಸರ್ಕಾರವನ್ನು ವಜಾಗೊಳಿಸಬೇಕು ಎಂದರು.