ಬೆಂಗಳೂರು ಗ್ರಾಮಾಂತರ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯಾವುದೇ ಒಂದು ಸಮರ್ಪಕ ದಾಖಲೆ ಇಲ್ಲದೆ ಸುಳ್ಳು ಆರೋಪ ಮಾಡಿ ದೇಶದಲ್ಲೇ ಅತ್ಯುತ್ತಮ ಆಡಳಿತ ನಡೆಸುತ್ತಿರುವ ಉತ್ತಮ ಜನ ಸ್ನೇಹಿ ಮುಖ್ಯಮಂತ್ರಿ ಆಡಳಿತವನ್ನು ಸಹಿಸಲಾರದೇ ಪ್ರತಿಪಕ್ಷದವರು ಪಾದಯಾತ್ರೆ ಆರಂಭಿಸಿದ್ದಾರೆ.
ಈ ಪಾದಯಾತ್ರೆಯಿಂದ ರಾಜ್ಯದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು. ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗುತ್ತಿದ್ದು, ಕೆಲವೆಡೆ ಅತಿವೃಷ್ಟಿಯಾಗಿ ಜನರು ಮನೆ – ಮಠ ಕಳೆದುಕೊಂಡು ನೆಲೆಯಿಲ್ಲದೆ ಪರದಾಡುತ್ತಿದ್ದು, ಜನರ ಸಂಕಷ್ಟಕ್ಕೆ ಸರಕಾರದ ಜತೆ ಕೈಜೋಡಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಬದಲು ಸಿದ್ದರಾಮಯ್ಯ ಅವರ ಜನಪ್ರಿಯತೆ ಸಹಿಸಲಾರದೇ ಸರಕಾರವನ್ನು ಅಸ್ಥಿರಗೊಳಿಸುವ ದುಸ್ಸಾಹಸಕ್ಕೆ ಬಿಜೆಪಿ – ಜೆಡಿಎಸ್ ಮುಂದಾಗಿವೆ ಎಂದು ಶಾಸಕ ಶರತ್ ಬಚ್ಚೇಗೌಡ ಆರೋಪಿಸಿದರು.
ಪ್ರಾರಂಭದಲ್ಲಿಯೇ ವಿಘ್ನಗಳಿಂದ ಮೈಸೂರು ಚಲೋ ಪಾದಯಾತ್ರೆ ಆರಂಭಿಸಿದ್ದು, ಬಿಜೆಪಿ – ಜೆಡಿಎಸ್ ದೋಸ್ತಿಯಲ್ಲಿ ಬಿರುಕು ಉಂಟಾಗಿದೆ. ಬಿಜೆಪಿಯಲ್ಲೂ ಆಂತರಿಕವಾಗಿ ಸಹ ಒಳ ಜಗಳ ಪ್ರಾರಂಭವಾಗಿದ್ದು, 2 ಗುಂಪುಗಳಾಗಿ ವಿಭಜನೆಯಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ಟೀಂ ಕಲ್ಯಾಣ ಕರ್ನಾಟಕದಿಂದ ಯಾತ್ರೆ ಆರಂಭಿಸುವುದಾಗಿ ಪರಸ್ಪರ ಒಮ್ಮತವಿಲ್ಲದೆ ಕಚ್ಚಾಡುತ್ತಿದ್ದಾರೆ ಎಂದು ಆರೋಪಿಸಿದರು.