ನವದೆಹಲಿ: ಉತ್ತರದ ರಾಜ್ಯಗಳು ಬಿಸಿಲಿನ ತಾಪಕ್ಕೆ ಅಕ್ಷರಶಃ ತತ್ತರಿಸಿಹೋಗಿವೆ. ಮರುಭೂಮಿಗಳ ರಾಜ್ಯವೆಂದೇ ಕರೆಯಲಾಗುವ ರಾಜಸ್ಥಾನದ ಫಲೋಡಿಯಲ್ಲಿ 50.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.ಹರಿಯಾಣದ ಸಿರ್ಸಾದಲ್ಲಿ 50.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ರಾಜಸ್ಥಾನದಲ್ಲಿ ನಿರಂತರ ಹೀಟ್ ವೇವ್ನಿಂದಾಗಿ 7 ದಿನಗಳಲ್ಲಿ 7 ಜೀವಗಳು ಬಲಿಯಾಗಿವೆ.
ಬೇಸಿಗೆಯ ಆರಂಭದಲ್ಲಿ `ನವತಾಪ’ ಎಂಬ 9 ದಿನಗಳು ಪ್ರಾರಂಭವಾಗುತ್ತವೆ. ಈ ದಿನಗಳಲ್ಲಿ ಅಧಿಕ ತಾಪಮಾನದಿಂದಾಗಿ 55 ಮಂದಿ ಸಾವನ್ನಪ್ಪಿರುವ ವರದಿಯಾಗಿದ್ದು, ಇಡೀ ಬೇಸಿಗೆ ಅವಧಿಯಲ್ಲಿ 122 ಮಂದಿ ಸಾವನ್ನಪ್ಪಿರುವುದಾಗಿ ಹೇಳಲಾಗ್ತಿದೆ.
ರಾಜಸ್ಥಾನದ 20 ಜಿಲ್ಲೆಗಳಲ್ಲಿ ಶಾಖದ ರೆಡ್ ಅಲರ್ಟ್ ಘೋಷಿಸಲಾಗಿದೆ. ಪಂಜಾಬ್, ಹರಿಯಾಣ ಮತ್ತು ದೆಹಲಿಗೆ ಸಂಪರ್ಕವಿರುವ ಪ್ರದೇಶಗಳು ಶಾಖದ ಅಲೆಯ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಿವೆ. ದೆಹಲಿಯಲ್ಲಿ ದಾಖಲೆಯ 52.3 ಡಿಗ್ರಿ ಉಷ್ಣಾಂಶ ದಾಖಲಾಗಿದ್ದು,
ನಗರದ ವಿದ್ಯುತ್ ಬೇಡಿಕೆಯು ಬುಧವಾರದಂದು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 8,302 ಮೆಗಾವ್ಯಾಟ್ಗೆ ತಲುಪಿದೆ. ಒಂದೇ ದಿನ ಅಗ್ನಿಶಾಮಕ ದಳಕ್ಕೆ 220 ಫೋನ್ ಕರೆಗಳು ಬಂದಿವೆ ಎನ್ನಲಾಗಿದೆ. ಮತ್ತೊಂದ್ಕಡೆ, ದೆಹಲಿಯಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದ್ದು, ವಾಟರ್ ಟ್ಯಾಂಕರ್ ಗಳಿಗೆ ಜನ ಮುಗಿಬೀಳ್ತಿದ್ದಾರೆ.