ದಾಖಲೆಗಳು ಇರುವುದೇ ಮುರಿಯೋದಕ್ಕೆ.. ಇದು ಎಲ್ಲಾ ಕ್ರೀಡೆಗಳಿಗೂ ಅನ್ವಯಿಸುತ್ತದೆ. ಕ್ರಿಕೆಟ್ನಲ್ಲಂತೂ ಕೆಲ ಸರ್ವಕಾಲಿಕ ಶ್ರೇಷ್ಠ ದಾಖಲೆಗಳು ಅಪರೂಪವಾಗಿವೆ. ಸಚಿನ್ ಗಳಿಸಿರುವ 100 ಶತಕಗಳ ದಾಖಲೆ ಯಾರು ಮುರಿಯುತ್ತಾರೆ ಎಂಬುದು ಈಗಲೂ ಕುತೂಹಲ ಮೂಡಿಸುತ್ತದೆ. ಅದೇ ರೀತಿ ದಿಗ್ಗಜ ಬ್ಯಾಟರ್ ವೆಸ್ಟ್ ಇಂಡೀಸ್ನ ಬ್ರಿಯಾನ್ ಲಾರಾ, ಟೆಸ್ಟ್ ಕ್ರಿಕೆಟ್ ಇನ್ನಿಂಗ್ಸ್ ಒಂದರಲ್ಲಿ ಗಳಿಸಿದ್ದಾರೆ 400 ರನ್.
ಈ ದಾಖಲೆ ಮುರಿಯುವುದು ಅಷ್ಟು ಸುಲಭದ ಮಾತೇ ಅಲ್ಲ. ಸಾಕಷ್ಟು ಸಂದರ್ಭಗಳಲ್ಲಿ ಒಂದು ಇನ್ನಿಂಗ್ಸ್ನಲ್ಲಿ ಎಲ್ಲಾ ಬ್ಯಾಟರ್ಗಳು ಸೇರಿ 400 ರನ್ ಗಳಿಸುವುದೇ ಸವಾಲಾಗಿದೆ. ಹಾಗಿರುವಾಗ 400 ರನ್ ಗಳಿಸುವುದು ಖಂಡಿತ ಸುಲಭದ ಮಾತಲ್ಲ. ಆದರೆ ಈ ದಾಖಲೆ ಮುರಿಯಬಲ್ಲ ಇಬ್ಬರು ಬ್ಯಾಟರ್ಗಳು ಭಾರತೀಯ ಕ್ರಿಕೆಟ್ ತಂಡದಲ್ಲಿ ಇದ್ದಾರೆ ಅಂತಾ ಸ್ವತಃ ಬ್ರಿಯಾನ್ ಲಾರಾ ಹೇಳಿದ್ದಾರೆ.
ಈ ಹಿಂದೆಯೇ ವೀರೇಂದ್ರ ಸೆಹ್ವಾಗ್ ಟೆಸ್ಟ್ ಕ್ರಿಕೆಟ್ನಲ್ಲಿ 400 ರನ್ ಗಳಿಸಬಹುದು ಎಂದು ಲಾರಾ ಲೆಕ್ಕಾಚಾರ ಹಾಕಿದ್ದರಂತೆ. ಯಾಕೆಂದರೆ ವೀರೇಂದ್ರ ಸೆಹ್ವಾಗ್ ಅಗ್ರೆಸಿವ್ ಬ್ಯಾಟರ್. ಪಂದ್ಯ ಯಾವುದೇ ಆಗಿರಲಿ ಬಾಲ್ ಇರೋದೇ ಚಚ್ಚೋಕೆ ಅನ್ನೋ ಶೈಲಿಯಲ್ಲಿ ಆಡುತ್ತಾರೆ. ಔಟ್ ಆಗುವ ಬಗ್ಗೆ ಅವರಿಗೆ ಚಿಂತೆಯೇ ಇರುತ್ತಿರಲಿಲ್ಲ. ಸೆಂಚುರಿ ಹೊಸ್ತಿಲಲ್ಲಿ ಸಿಕ್ಸರ್ ಚಚ್ಚಲು ಮುನ್ನುಗ್ಗುತ್ತಿದ್ದರು ವೀರು ಪಾಜಿ. ಎರಡು ಬಾರಿ ತ್ರಿಬಲ್ ಸೆಂಚುರಿ ಸಿಡಿಸಿರುವ ಸೆಹ್ವಾಗ್ 400ರ ಮೈಲಿಗಲ್ಲು ತಲುಪಲು ಆಗಲಿಲ್ಲ.
ಇದೀಗ ಭಾರತೀಯ ಕ್ರಿಕೆಟ್ ತಂಡದಲ್ಲಿ ಉದಯೋನ್ಮುಖ ಆಟಗಾರರ ಹವಾ ಜೋರಾಗಿದೆ. ಆ ಪೈಕಿ ಚುಟುಕು ಕ್ರಿಕೆಟ್ನಲ್ಲಿ ಹೊಡಿಬಡಿ ಆಟದ ಮೂಲಕ ಗಮನ ಸೆಳೆದವರು ಯಶಸ್ವಿ ಜೈಸ್ವಾಲ್ ಹಾಗೂ ಶುಭಮಾನ್ ಗಿಲ್. ಇವರಿಬ್ಬರೂ ಟೆಸ್ಟ್ನಲ್ಲೂ ಬೆಸ್ಟ್ ಅನ್ನೋದು ಈಗಾಗಲೇ ಸಾಬೀತಾಗಿದೆ. ವೇಗವಾಗಿ ರನ್ ಗಳಿಸುವ ಇವರು ಟೆಸ್ಟ್ನಲ್ಲಿ 400 ರನ್ ಮೈಲಿಗಲ್ಲು ತಲುಪಬಲ್ಲರು ಅಂತಾ ಸ್ವತಃ ಲಾರಾ ಅಭಿಪ್ರಾಯಪಟ್ಟಿದ್ದಾರೆ.