ಬೆಂಗಳೂರು: ಬಿಜೆಪಿ-ಜೆಡಿಎಸ್ನವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಕಪ್ಪು ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ಪ್ರಾಮಾಣಿಕ. ನನ್ನನ್ನು ಮುಗಿಸೋಕೆ ಸಾಧ್ಯವಿಲ್ಲ ಎಂದು ವಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.
ಮಾತನಾಡಿದ ಸಿದ್ದರಾಮಯ್ಯ, ದ್ವೇಷದ ರಾಜಕಾರಣ ಮಾಡುವವರಿಗೆ ವ್ಯಕ್ತಿ ಹಿನ್ನೆಲೆ, ಚಾರಿತ್ರ್ಯ ನೋಡಲು ಹೋಗಲ್ಲ. ದ್ವೇಷವೊಂದೇ ಅವರ ಮುಂದಿರುತ್ತದೆ. ನನಗೆ ಬಿಜೆಪಿ-ಜೆಡಿಎಸ್ನವರನ್ನು ನಾನು ನೋಡೋಕೆ ಹೋಗಲ್ಲ. ನನ್ನ ರಾಜಕೀಯ ಜೀವನದಲ್ಲಿ ಕಪ್ಪುಮಸಿ ಬಳಿಯುವ ಪ್ರಯತ್ನ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ನಾನು ರಾಜಕೀಯದಲ್ಲಿ ಎಂಎಲ್ಎ ಆಗಿ 41 ವರ್ಷ, ಮಂತ್ರಿಯಾಗಿ 40 ವರ್ಷಗಳಾಗಿ ಬಂತು. ರಾಜ್ಯಕ್ಕೆ 15 ಬಜೆಟ್ ಮಂಡಿಸಿದ್ದೇನೆ. 10-12 ವರ್ಷಗಳಿಗೆ ಹೆಚ್ಚು ಕಾಲ ಹಣಕಾಸು ಮಂತ್ರಿಯಾಗಿದ್ದೆ. ಯಾವತ್ತು ಕೂಡ ಕಳಂಕ ಬಂದಿಲ್ಲ. ನಾನು ಬಡವರ ಪರವಿದ್ದು, ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇನೆಂಬ ಕಾರಣಕ್ಕೆ ಈಗ ಕಳಂಕ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಐಡಿಯಾಲಜಿಕಲ್ ಆಗಿ ಬಿಜೆಪಿ-ಜೆಡಿಎಸ್ನವರು ಬಡವರ ವಿರೋಧಿಗಳು. ನಾವು ಪರಿಶಿಷ್ಟ ಜಾತಿ- ವರ್ಗದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಹಣದಲ್ಲಿ ಖರ್ಚು ಮಾಡಬೇಕು ಅಂತಾ ಕಾನೂನು ಮಾಡಿದೆವು. ಅದನ್ನು ಕೇಂದ್ರದವರಾಗಲಿ, ಬಿಜೆಪಿ ಅಧಿಕಾರದಲ್ಲಿ ಇರುವಂತಹ ರಾಜ್ಯದಲ್ಲಿ ಮಾಡಿದ್ದಾರಾ? ನಾವು 2013 ರಲ್ಲೇ ಮಾಡಿದ್ದೀವಿ. ಅವರೇಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.