ಆರ್ ಸಿಬಿ ಸೋಲಿಗೆ ದಿನೇಶ್ ಕಾರ್ತಿಕ್ ಕಾರಣ ಎಂದು ಅಭಿಮಾನಿಗಳು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಕರಣ್ ಶರ್ಮಾರೊಂದಿಗೆ ಒಂಟಿ ರನ್ ಗಳನ್ನು ಕದಿಯಲು ದಿನೇಶ್ ಕಾರ್ತಿಕ್ ನಿರಾಕರಿಸಿದ್ದೆ ತಂಡದ ಸೋಲಿಗೆ ಕಾರಣ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
223 ರನ್ ಗಳ ರನ್ ಚೇಸ್ ಮಾಡಿದ ಆರ್ ಸಿಬಿಯ ಪರ 20ನೇ ಓವರ್ ನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ ಕರಣ್ ಶರ್ಮಾ 3 ಸ್ಫೋಟಕ ಸಿಕ್ಸರ್ ಸಿಡಿಸಿ ಗೆಲುವಿನ ಆಸೆ ಮೂಡಿಸಿದ್ದರಾದರೂ ವಿಕೆಟ್ ಒಪ್ಪಿಸಿದ್ದರಿಂದ ಗೆಲುವು ಮರೀಚಿಕೆ ಆಯಿತು. ಕೆಕೆಆರ್ ಯುವ ವೇಗಿ ಹರ್ಷಿತ್ ರಾಣಾ ಓವರ್ ನಲ್ಲಿ ಸುಯೇಶ್ ಪ್ರಭುದೇಸಾಯ್ ವಿಕೆಟ್ ಒಪ್ಪಿಸಿದ ನಂತರ 18ನೇ ಓವರ್ ನಲ್ಲಿ ಕ್ರೀಸ್ ಗೆ ಇಳಿದ ಕರಣ್ ಶರ್ಮಾ 7 ಎಸೆತಗಳಲ್ಲಿ 20 ರನ್ ಬಾರಿಸಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ ನಲ್ಲಿ ಕಾಟ್ ಆಂಡ್ ಬೌಲ್ಡ್ ಆಗುವ ಮೂಲಕ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದರು
ಅಂತಿಮ ಓವರ್ ಗಳಲ್ಲಿ ಕೊನೆಯ ಬ್ಯಾಟರ್ ರೂಪದಲ್ಲಿ ದಿನೇಶ್ ಕಾರ್ತಿಕ್ ಒಬ್ಬರೇ ಕ್ರೀಸ್ ನಲ್ಲಿ ಉಳಿದಿದ್ದರಿಂದ ಪಂದ್ಯವನ್ನು ಗೆಲ್ಲಿಸುವ ಹೊಣೆಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡರು. ಸುಲಭವಾಗಿ ಕದಿಯಬಹುದಾಗಿದ್ದ ಮೂರು ಒಂಟಿ ರನ್ ಗಳನ್ನು ಕಾರ್ತಿಕ್ ನಿರಾಕರಿಸಿದ್ದರು. ಅಂತಿಮವಾಗಿ 18 ಎಸೆತಗಳಲ್ಲಿ 25 ರನ್ ಗಳಿಸಿದ್ದ ದಿನೇಶ್ ಕಾರ್ತಿಕ್ ಅವರು ಆಂಡ್ರೆ ರಸೆಲ್ ಅವರಿಗೆ ವಿಕೆಟ್ ಒಪ್ಪಿಸಿದ್ದರು
ಪಂದ್ಯ ಗೆಲ್ಲಲು ಅಂತಿಮ ಓವರ್ ನಲ್ಲಿ ಆರ್ಸಿಬಿಗೆ 21 ರನ್ ಗಳ ಅವಶ್ಯಕತೆ ಇತ್ತು. ಮಿಚೆಲ್ ಸ್ಟಾರ್ಕ್ ಅವರ ಆರಂಭಿಕ 4 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಸಿಡಿಸಿದ ಕರಣ್ ಶರ್ಮಾ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ ಕರಣ್ ಶರ್ಮಾ ವಿಕೆಟ್ ಒಪ್ಪಿಸಿದ ಪರಿಣಾಮ 221 ರನ್ ಗಳಿಗೆ ಆಲ್ ಔಟ್ ಆದ ಆರ್ ಸಿಬಿ 1 ರನ್ ನಿಂದ ಸೋಲು ಕಂಡು ಪ್ಲೇ ಆಫ್ ರೇಸ್ ನಿಂದ ಹೊರಬಿದ್ದಿದೆ. ಈ ನಡುವೆ ಅಭಿಮಾನಿಗಳು ದಿನೇಶ್ ಕಾರ್ತಿಕ್ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿನೇಶ್ ಕಾರ್ತಿಕ್ ಅವರು ಕರಣ್ ಶರ್ಮಾ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ನಿರ್ಲಕ್ಷಿಸಿ 3 ಒಂಟಿ ರನ್ ಕದಿಯದೆ ಇದ್ದಿದ್ದೇ ತಂಡದ ಸೋಲಿಗೆ ಕಾರಣ,” ಎಂದು ಅಭಿಮಾನಿಯೊಬ್ಬ ತಮ್ಮ ಎಕ್ಸ್ ಗೋಡೆ ಮೇಲೆ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.