ಹಾಸನ: ಸಿದ್ದರಾಮಯ್ಯ ಮಾತನಾಡುವಾಗ ಡೆತ್ ನೋಟ್ ಓದಿದರೂ ಅದರಲ್ಲಿ ಸಚಿವರು, ಎಂಎಲ್ಎ, ವಾಲ್ಮೀಕಿ ನಿಗಮದ ಅಧ್ಯಕ್ಷರ ಹೆಸರನ್ನು ಬಿಟ್ಟು ಓದುತ್ತಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗೇಲಿ ಮಾಡಿದ್ದಾರೆ. ಇದೇ ವೇೆಳೆ ಈ ಜಾತಿಯವನಾದರೆ ಕಳ್ಳತನ ಮಾಡಬಹುದು,
ಈ ಜಾತಿಯವನಾದರೆ ಮಾಡಬಾರದು ಎಂದು ಏನಾದರೂ ನಮ್ಮ ದೇಶದ ಸಂವಿಧಾನದಲ್ಲಿ ಇದೆಯಾ ಎಂದು ಕಾಲೆಳೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗದ ನಾಯಕ ಎಂಬ ಕಾರಣಕ್ಕೆ ವಿಧಾನಸಭೆಯಲ್ಲಿ ಮಾತನಾಡಲು ಬಿಡುತ್ತಿಲ್ಲ ಎಂಬ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.
ಸಿಎಂ ಸಿದ್ದರಾಮಯ್ಯ ವಾಲ್ಮೀಕಿ ಹಗರಣದಲ್ಲಿ ಯಾರೂ ಭಾಗಿಯಾಗಿಲ್ಲ. ಅಧಿಕಾರಿಗಳೇ ಎಲ್ಲಾ ತಿಂದು ಹಾಕಿದ್ದಾರೆ ಅಂತ ಹೇಳುವ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ. 187 ಕೋಟಿ ರೂಪಾಯಿ ಅಧಿಕಾರಿಗಳೇ ತಿನ್ನಲು ಆಗುತ್ತಾ? ಅದರ ಹಿಂದೆ ದೊಡ್ಡ ತಿಮಿಂಗಿಲಗಳೇ ಇವೆ. ಅವುಗಳ ಜೊತೆ ಅಧಿಕಾರಿಗಳು ತಿಂದಿದ್ದಾರೆ. ಆದ್ರೆ ಅಧಿಕಾರಿಗಳು ಅಲ್ಲಿ, ಇಲ್ಲಿ ಬಿದ್ದಿದ್ದನ್ನು ತಿಂದಿದ್ದಾರೆ ಅಷ್ಟೇ ಎಂದು ಟೀಕಿಸಿದರು.
ಈ ಸರ್ಕಾರ ಪಾಪರ್ ಆಗಿದೆ, ಅವರ ಬಳಿ ದುಡ್ಡಿಲ್ಲ. ಅಂದಾಜು ವೆಚ್ಚ ತಯಾರಿಸದೇ ಗ್ಯಾರೆಂಟಿ ಯೋಜನೆ ತಂದಿದ್ದಾರೆ. ಅದಕ್ಕೇ ಈಗ ದಲಿತರ ಹಣ ಹುಡುಕುತ್ತಿದ್ದಾರೆ. ಒಕ್ಕಲಿಗರ ನಿಗಮ, ಬ್ರಾಹ್ಮಣರು, ಲಿಂಗಾಯತರ ನಿಗಮದ ಹಣ ಇದೆ. ಎಲ್ಲವನ್ನೂ ಬಳಸಿಕೊಳ್ಳಿ.
ಇಲ್ಲವಾದರೆ ನಿಮ್ಮ ಬಾಳು ಬೀದಿಗೆ ಬರುತ್ತದೆ ಎಂದು ನಾನೇ ಹೇಳಿದ್ದೇನೆ. ಈ ಸರ್ಕಾರ ಒಂದು ರೀತಿ ಕೋಮಾ ಸ್ಟೇಜ್ನಲ್ಲಿದೆ. ನಿಮಗೆ ಯಾವ್ಯಾವ ಜಾತಿ ಬೇಕು, ಸಂವಿಧಾನ ಬದಲಾವಣೆ ಮಾಡಿ ಬಿಡೋಣ. ಇಂತಹ ಜಾತಿಯವರು ಲೂಟಿ ಹೊಡೆದರೆ, ಅಕ್ರಮ ಮಾಡಿದರೆ, ಕಳ್ಳತನ ಮಾಡಿದರೆ ಯಾವುದೇ ಕ್ರಮ ತೆಗೆದುಕೊಳ್ಳುವ ಆಗಿಲ್ಲ ಎಂದು ಕಾನೂನು ಮಾಡಿಬಿಡಿ ಎಂದು ಕುಟಕಿದರು.