ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ T20 ವರ್ಲ್ಡ್ಕಪ್ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಮಣಿಸಿ ಇದೇ ಮೊದಲ ಬಾರಿಗೆ ಸೌತ್ ಆಫ್ರಿಕಾ ತಂಡ ಫೈನಲ್ಗೆ ಪ್ರವೇಶ ನೀಡಿದೆ. ಐಡೆನ್ ಮಾರ್ಕ್ರಾಮ್ ಅವರು ವಿಶ್ವಕಪ್ ಫೈನಲ್ಗೆ ಅರ್ಹತೆ ಪಡೆದ ಮೊದಲ ದಕ್ಷಿಣ ಆಫ್ರಿಕ ತಂಡದ ಕ್ಯಾಪ್ಟನ್ ಆಗಿದ್ದಾರೆ.
1992 ರಿಂದ ವಿಶ್ವಕಪ್ನಲ್ಲಿ ಕಣಕ್ಕಿಳಿಯುತ್ತಿರುವ ಆಫ್ರಿಕನ್ನರು ಒಮ್ಮೆಯೂ ಫೈನಲ್ಗೆ ಪ್ರವೇಶಿಸಿರಲಿಲ್ಲ. ಇದೀಗ ಅಫ್ಘಾನಿಸ್ತಾನ್ ತಂಡವನ್ನು ಬಗ್ಗು ಬಡಿದು ಚೊಚ್ಚಲ ಬಾರಿ ಫೈನಲ್ ಸುತ್ತಿಗೆ ಪ್ರವೇಶಿಸಿದೆ.
ಇದಕ್ಕೂ ಮುನ್ನ ಟ್ರಿನಿಡಾಡ್ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ತಂಡದ ನಾಯಕ ರಶೀದ್ ಖಾನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಮೊದಲ ಓವರ್ನಿಂದಲೇ ಕರಾರುವಾಕ್ ದಾಳಿ ಸಂಘಟಿಸಿದ ಸೌತ್ ಆಫ್ರಿಕಾ ಬೌಲರ್ಗಳು ಆರಂಭದಲ್ಲೇ ಆಘಾತ ನೀಡುವಲ್ಲಿ ಯಶಸ್ವಿಯಾದರು.
ಮಾರ್ಕೊ ಯಾನ್ಸೆನ್ ಮೊದಲ ಓವರ್ನಲ್ಲೇ ರಹಮಾನುಲ್ಲಾ ಗುರ್ಬಾಝ್ (0) ವಿಕೆಟ್ ಪಡೆದರೆ, ಆ ಬಳಿಕ ಬಂದ ಗುಲ್ಬದ್ದಿನ್ ನೈಬ್ (9) ಕ್ಲೀನ್ ಬೌಲ್ಡ್ ಆದರು. ಇನ್ನು ಇಬ್ರಾಹಿಂ ಝದ್ರಾನ್ (2) ರಬಾಡ ಎಸೆತದಲ್ಲಿ ವಿಕೆಟ್ ಕೈಚೆಲ್ಲಿದರು.
ಇದರ ನಡುವೆ ಅಝ್ಮತುಲ್ಲಾ ಒಮರ್ಝಾಹಿ 10 ರನ್ಗಳಿಸಿದರೂ ಅನ್ರಿಕ್ ನೋಕಿಯಾ ಎಸೆತದಲ್ಲಿ ಔಟಾದರು. ಇನ್ನು ಅನುಭವಿ ಬ್ಯಾಟರ್ ಮೊಹಮ್ಮದ್ ನಬಿ ಸೊನ್ನೆ ಸುತ್ತಿದರೆ, ನಂಗೆಯಾಲಿಯಾ ಖರೋಟೆ 2 ರನ್ಗಳಿಸಿ ಔಟಾದರು. ಪರಿಣಾಮ 23 ರನ್ ಕಲೆಹಾಕುವಷ್ಟರಲ್ಲಿ
ಅಫ್ಘಾನಿಸ್ತಾನ್ ತಂಡವು 5 ವಿಕೆಟ್ ಕಳೆದುಕೊಂಡಿತು.
ಆ ಬಳಿಕ ಬಂದ ಕರೀಮ್ ಜನ್ನತ್ (8) ಮತ್ತು ರಶೀದ್ ಖಾನ್ (8) ಅಲ್ಪ ಹೊತ್ತು ಕ್ರೀಸ್ನಲ್ಲಿದ್ದರು. ಇವರಿಬ್ಬರ ಪತನದೊಂದಿಗೆ ಪೆವಿಲಿಯನ್ ಪರೇಡ್ ಮುಂದುವರೆಸಿದ ಅಫ್ಘಾನಿಸ್ತಾನ್ ತಂಡ 11.5 ಓವರ್ಗಳಲ್ಲಿ 56 ರನ್ಗಳಿಸಿ ಆಲೌಟ್ ಆಯಿತು.
ಸೌತ್ ಆಫ್ರಿಕಾ ಪರ ತಬ್ರೇಝ್ ಶಂಸಿ ಹಾಗೂ ಮಾರ್ಕೊ ಯಾನ್ಸೆನ್ ತಲಾ 3 ವಿಕೆಟ್ ಪಡೆದರೆ, ಕಗಿಸೊ ರಬಾಡ ಹಾಗೂ ಅನ್ರಿಕ್ ನೋಕಿಯಾ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.
ಕೇವಲ 57 ರನ್ಗಳ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಫಝಲ್ಹಕ್ ಫಾರೂಖಿ ಎಸೆದ 2ನೇ ಓವರ್ನ 5ನೇ ಎಸೆತದಲ್ಲಿ ಕ್ವಿಂಟನ್ ಡಿಕಾಕ್ (5) ಕ್ಲೀನ್ ಬೌಲ್ಡ್ ಆದರು. ಈ ಹಂತದಲ್ಲಿ ಜೊತೆಗೂಡಿದ ರೀಝ ಹೆಂಡ್ರಿಕ್ಸ್ ಹಾಗೂ ಐಡೆನ್ ಮಾರ್ಕ್ರಾಮ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ 8.5 ಓವರ್ಗಳಲ್ಲಿ 57 ರನ್ಗಳ ಗುರಿ ಮುಟ್ಟುವ ಮೂಲಕ ಸೌತ್ ಆಫ್ರಿಕಾ ತಂಡವು 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸೌತ್ ಆಫ್ರಿಕಾತಂಡವು ಟಿ20 ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಫೈನಲ್ಗೆ ಪ್ರವೇಶಿಸಿದೆ. ಅಲ್ಲದೆ ಜೂನ್ 29 ರಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತ ಅಥವಾ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.