ಬೆಂಗಳೂರು: ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ನಾನು 14 ಬಜೆಟ್ ಮಂಡಿಸಿದ್ದೇನೆ. ಇದೇ ಮೊದಲ ಸಲ ವಿಪಕ್ಷದವರು ಒಬ್ಬರೂ ಇಲ್ಲದ ಸಮಯದಲ್ಲಿ ಉತ್ತರ ಕೊಡುತ್ತಿದ್ದೇನೆ.
ವಿಪಕ್ಷದವರ ಆಸನಗಳು ಖಾಲಿ ಇವೆ. ಈ ತರಹದ ಬಜೆಟ್ ಉತ್ತರ ಇದೇ ಮೊದಲು. ವಿಪಕ್ಷ ನಾಯಕ ಇಲ್ಲದೇ ಮೊದಲ ಸಲ ಬಜೆಟ್ ಅಧಿವೇಶನ ನಡೆದಿದೆ. ರಾಷ್ಟ್ರೀಯ ಪಕ್ಷ ಬಿಜೆಪಿಗೆ ಒಬ್ಬ ವಿಪಕ್ಷ ನಾಯಕನ ಆಯ್ಕೆ ಮಾಡಿಕೊಳ್ಳಲು ಆಗಿಲ್ಲ ಅಂದರೆ ಅದು ಪ್ರಜಾಪ್ರಭುತ್ವಕ್ಕೆ ಮಾರಕ. ಬಿಜೆಪಿಯವರಿಗೆ ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವ ವ್ಯವಸ್ಥೆಗಳ ಮೇಲೆ ನಂಬಿಕೆ ಇಲ್ಲ ಎಂದರು.
ಮಹದಾಯಿ ಯೋಜನೆ ಬಗ್ಗೆ ಶಾಸಕ ಎನ್.ಹೆಚ್.ಕೋನರೆಡ್ಡಿ ಪ್ರಸ್ತಾಪ ಮಾಡಿದ್ದು, ಬಜೆಟ್ನಲ್ಲಿ ಹೇಳಿದಂತೆ ಮಹದಾಯಿ ಯೋಜನೆ ಜಾರಿ ಮಾಡಬೇಕು. ಮಹದಾಯಿ ಯೋಜನೆ ವಿಚಾರವಾಗಿ ಸರ್ವಪಕ್ಷ ಸಭೆ ಕರೆಯಬೇಕು. ಸಿಎಂ ಮಹದಾಯಿ ಯೋಜನೆ ಜಾರಿ ಮಾಡುವ ಭರವಸೆ ಕೊಡಬೇಕು.
ಬಸವರಾಜ ಬೊಮ್ಮಾಯಿ ಅವರು ಯೋಜನೆ ಜಾರಿ ಮಾಡುತ್ತಾರೆ ಎಂದು ಅಂದುಕೊಂಡಿದ್ದೆ. ಈ ಹಿಂದೆ ಯೋಜನೆ ಜಾರಿಗೆ ಆಗ್ರಹಿಸಿ ಅವರು ಪಾದಯಾತ್ರೆ ಮಾಡಿದ್ದರು. ನಾನೂ ಕೂಡ ಬಿಜೆಪಿಯವರ ಜೊತೆ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದೆ. ಆದರೆ ಬೊಮ್ಮಾಯಿ ಮಹದಾಯಿ ಯೋಜನೆ ಜಾರಿ ಮಾಡಲಿಲ್ಲ. ಉತ್ತರ ಕರ್ನಾಟಕ ಭಾಗದ ಜನ ಸಿದ್ದರಾಮಯ್ಯ ಮೇಲೆ ಭರವಸೆ ಇಟ್ಟಿದ್ದಾರೆ. ಈ ಯೋಜನೆ ಜಾರಿ ಮೂಲಕ ಸಿಎಂ ಒಂದು ಹೊಸ ಸಂದೇಶ ಕೊಡಬೇಕು. ಕಿತ್ತೂರು ಕರ್ನಾಟಕಕ್ಕೆ ಸಿಎಂ ಸಿದ್ದರಾಮಯ್ಯ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.