ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಗಣೇಶನ ಶಾಪ ತಟ್ಟಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ಅರ್ಜಿಯನ್ನು ಹೈಕೋರ್ಟ್ ಎತ್ತಿಹಿಡಿದ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ವೇಳೆ ಹಲವೆಡೆ ಗಣೇಶ ಮೆರವಣಿಗೆ ಮಾಡೋಕೆ ಅವಕಾಶ ಕೊಡಲಿಲ್ಲ. ಹಿಂದೂಗಳಿಗೆ ಕಿರುಕುಳ ಕೊಟ್ಟಿದ್ದಾರೆ. ಹಿಂದೂಗಳ ಶಾಪದಿಂದ ಸಿಎಂಗೆ ಈ ರೀತಿ ಆಗಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಮಾಜಿ ಸಚಿವ ನಾಗೇಂದ್ರ ರಾಜೀನಾಮೆ ಮೊದಲನೇ ಜಯವಾದರೆ, ಸಿಎಂ ವಿರುದ್ಧದ ತೀರ್ಪು ಎರಡನೇ ಜಯವಾಗಿದೆ. ಕಾಂಗ್ರೆಸ್ನವರು ರಾಜಭವನದ ಮೇಲೆ ಇಲ್ಲ ಸಲ್ಲದ ಅಪಾದನೆ ಮಾಡಿದ್ದರು. ಗವರ್ನರ್ ವಿರುದ್ಧ ಅವಹೇಳನಕಾರಿ ಮಾತಾಡಿದ್ದರು. ಈಗ ಕಾಂಗ್ರೆಸ್ ರಾಜ್ಯದ ಜನರ ಮುಂದೆ ಕ್ಷಮೆ ಕೇಳಬೇಕು. ಸಿಎಂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದ ಜನತೆಗೆ ಕಾಂಗ್ರೆಸ್ ಒಳ್ಳೆದು ಮಾಡುತ್ತೆ ಎಂಬ ನಂಬಿಕೆ ಇತ್ತು. ಈಗ ಆ ನಂಬಿಕೆ ಹೋಗಿದೆ. ಭ್ರಷ್ಟಾಚಾರದ ಕಾಂಗ್ರೆಸ್, ಭ್ರಷ್ಟಾಚಾರದ ಸರ್ಕಾರ ಎಂದು ಜನರಿಗೆ ಗೊತ್ತಾಗಿದೆ. ನಾವು ರಾಜೀನಾಮೆ ಕೇಳೊದು ಒಂದು ಕಡೆ ಆದರೆ, ಕಾಂಗ್ರೆಸ್ನವರೇ ಸಿದ್ದರಾಮಯ್ಯ ಅವರನ್ನ ಇಳಿಸೊಕೆ ಗುಂಡಿ ತೋಡಿದ್ದಾರೆ. ಈಗಾಗಲೇ ಏಳೆಂಟು ಜನ ಸಿಎಂ ಆಗೋಕೆ ಸೂಟ್ ಹೊಲಿಸಿಕೊಂಡು ತಯಾರಾಗಿದ್ದಾರೆ ಎಂದರು.
ಸಿದ್ದರಾಮಯ್ಯ ರಾಮಕೃಷ್ಣ ಹೆಗಡೆಯವರ ಶಿಷ್ಯ ಎಂದು ಹೇಳ್ತಾರೆ. ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಲಿ. ನೈತಿಕತೆ, ಸಮಾಜವಾದ ಸಿದ್ಧಾಂತ ಸಿದ್ದರಾಮಯ್ಯರಲ್ಲಿ ಇದೆ. ಅವರು ರಾಜೀನಾಮೆ ಕೊಡ್ತಾರೆ ಎನ್ನುವ ವಿಶ್ವಾಸ ನಮ್ಮಲ್ಲಿದೆ. ರಾಜೀನಾಮೆ ಕೊಡದೇ ಇದ್ರೆ ಹೋರಾಟ ಶುರು ಮಾಡುತ್ತೇವೆ. ಹೋರಾಟ ಮಾಡಿಯೇ ರಾಜೀನಾಮೆ ಪಡೆಯುತ್ತೆವೆ ಎಂದು ಎಚ್ಚರಿಕೆ ನೀಡಿದ್ದಾರೆ.