ಬೆಂಗಳೂರು : ನಾವು ಸಂವಿಧಾನದ ಮಾಲೀಕರು. ಸಂವಿಧಾನ ಕಿತ್ತು ಎಸೆಯುವುದರಲ್ಲಿ ನಮ್ಮ ಆಸಕ್ತಿಯಿಲ್ಲ, ಸಂವಿಧಾನದ ವಿರುದ್ಧ ಇರುವವರನ್ನು ಕಿತ್ತು ಎಸೆಯಬೇಕು ಎಂಬ ಅಬ್ರಹಾಂ ಲಿಂಕನ್ ಅವರ ಮಾತುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉಲ್ಲೇಖಿಸಿದರು. ನಗರದ ಅರಮನೆ ಮೈದಾನದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನದ ವಿರುದ್ಧ ಎರಡು ಅಪಪ್ರಚಾರಗಳು ನಡೆಯುತ್ತಿದೆ. ಸಂವಿಧಾನ ದಲಿತರ ಉದ್ದಾರಕ್ಕಾಗಿದೆ ಹಾಗೂ ಸಾಮಾಜಿಕ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿಲ್ಲ ಎಂದು ಅಪಪ್ರಚಾರ ಮಾಡುತ್ತಿದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವನ್ನು ಸ್ಪಷ್ಟವಾಗಿ ಹೇಳುವುದರಿಂದ ಇದರ ವಿರುದ್ಧ ಇರುವ ಜನರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅರಿಯಬೇಕು. 1950 ಜನವರಿ 26 ರಿಂದ ಜಾರಿಗೆ ಬಂದಾಗಿನಿಂದ ಈ ಅಪಪ್ರಚಾರ ನಡೆಯುತ್ತಿದೆ. ಇದನ್ನು ನಾವು ಯಾರೂ ಸಹಿಸಬಾರದು. ಸಂವಿಧಾನ ರಕ್ಷಣೆಯಾದರೆ ನಾವೆಲ್ಲರೂ ಉಳಿಯುತ್ತೇವೆ. ಇಲ್ಲದಿದ್ದರೆ ಅಪಾಯಕ್ಕೆ ಸಿಲುಕುತ್ತೇವೆ ಎಂದರು.