ನವದೆಹಲಿ ;- ದೇಶ ವಿಭಜಿಸಿದವರು ಭಾರತ ಮಾತೆಯ ಸಾವು ಬಯಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಮಣಿಪುರದಲ್ಲಿ ಭಾರತ ಮಾತೆಯನ್ನು ಹತ್ಯೆ ಮಾಡಲಾಗಿದೆ ಎಂಬ ರಾಹುಲ್ ಗಾಂಧಿ ಆರೋಪವನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇಶವನ್ನು ವಿಭಜನೆ ಮಾಡಿದ ಮತ್ತು ದೇಶದ ಜನರ ಮೇಲೆ ದಾಳಿ ನಡೆಸಿದ ಇತಿಹಾಸ ಹೊಂದಿರುವವರೇ ಇಂದು ಭಾರತ ಮಾತೆಯ ಸಾವನ್ನು ಬಯಸುತ್ತಿದ್ದಾರೆ ಎಂದು ವಾಕ್ಪ್ರಹಾರ ನಡೆಸಿದರು
ಕಳೆದ 3 ದಿನಗಳಿಂದ ಅವಿಶ್ವಾಸ ನಿರ್ಣಯದ ಚರ್ಚೆ ವೇಳೆ ವಿಪಕ್ಷ ನಾಯಕರು ಮಾಡಿದ ಟೀಕೆಗೆ ವಿಸ್ತೃತವಾಗಿ ತಿರುಗೇಟು ನೀಡಿದ ಪ್ರಧಾನಿ ಮೋದಿ, ತಮ್ಮ ಸರ್ಕಾರದ ಆಡಳಿತವನ್ನು ಸಮರ್ಥಿಸಿಕೊಂಡರು. ಜೊತೆಗೆ 2024ರಲ್ಲಿ ಇನ್ನೂ ಭಾರೀ ಬಹುಮತದೊಂದಿಗೆ ತಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ನಡುವೆ ಒಂದೂವರೆ ಗಂಟೆಗಳ ಭಾಷಣದ ಹೊರತಾಗಿಯೂ ಪ್ರಧಾನಿ ಮೋದಿ ಮಣಿಪುರ ವಿಷಯವನ್ನು ಪ್ರಸ್ತಾಪಿಸಲಿಲ್ಲ ಎಂದು ವಿಪಕ್ಷಗಳು ಸಭಾತ್ಯಾಗ ಮಾಡಿದವು. ಹೀಗಾಗಿ ಮೋದಿ ಭಾಷಣದ ಬಳಿಕ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಲಾಯಿತು. ಈ ವೇಳೆ ಧ್ವನಿ ಮತದ ಮೂಲಕ ನಿರ್ಣಯವನ್ನು ಸೋಲಿಸಲಾಯಿತು.
ತಮ್ಮ ಸುದೀರ್ಘ ಭಾಷಣದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರಗಳು, ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೋದಿ, ‘ಭಾರತ ಮಾತೆಯನ್ನು ಗುಲಾಮಗಿರಿಯಿಂದ ಬಿಡುಗಡೆ ಮಾಡುವ ವೇಳೆ ಆಕೆಯ ಅವಯವಗಳನ್ನು ಕತ್ತರಿಸಿ ಮೂರು ಭಾಗ ಮಾಡಿದ್ದೇ ಕಾಂಗ್ರೆಸ್ ಎಂದು ಟೀಕಿಸಿದ ಮೋದಿ, ಕಾಂಗ್ರೆಸ್ಗೆ ಯಾವುದೇ ನೀತಿ, ಯಾವುದೇ ಗುರಿ, ಯಾವುದೇ ದೂರದೃಷ್ಟಿ, ಜಾಗತಿಕ ಆರ್ಥಿಕತೆಯ ಮತ್ತು ಭಾರತದ ಆರ್ಥಿಕತೆ ಕುರಿತು ಅರಿವಿಲ್ಲ. ಪಕ್ಷದ ನಾಯಕತ್ವ ಗೊತ್ತುಗುರಿಯಿಲ್ಲದೆ ಒದ್ದಾಡುತ್ತಿದೆ. ವಿದೇಶಿಯೊಬ್ಬರು ಸ್ಥಾಪಿಸಿದ ಪಕ್ಷದ ಗುರುತು, ಧ್ವಜ, ಚುನಾವಣಾ ಚಿಹ್ನೆ, ಚಿಂತನೆ ಎಲ್ಲವೂ ಕದ್ದಿದ್ದು ಎಂದು ಟೀಕಿಸಿದರು.