ಬೆಂಗಳೂರು ;- ಸಭಾಪತಿ ಸ್ಥಾನದಲ್ಲಿರುವವರು ಅದರ ಘನತೆ ಕಾಪಾಡಬೇಕು, ಧ್ವನಿ ಹತ್ತಿಕ್ಕುವ ಕೆಲಸ ಈ ಸರ್ಕಾರ ಮಾಡ್ತಿದೆ, ಮುಂದಿನ ದಿನಗಳಲ್ಲಿ ಜನರೇ ಇವರಿಗೆ ಬುದ್ದಿ ಕಲಿಸ್ತಾರೆ ಎಂದು ಪರಿಷತ್ ಸದಸ್ಯ ಟಿಎ ಶರವಣ ಅವರು ಕಿಡಿಕಾರಿದರು.
ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಸಭೆಗೆ IAS ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡ ಆಡಳಿತ ಪಕ್ಷದ ವಿರುದ್ಧ ಬಿಜೆಪಿ ಜೆಡಿಎಸ್ ಮುಖಂಡರು ಸದನದಲ್ಲಿ ಪ್ರತಿಭಟನೆ ಮಾಡಿದರು. ಹೀಗಾಗಿ ಪ್ರಶ್ನಿಸಿದವರನ್ನು ಸ್ಪೀಕರ್ ಅಮಾನತು ಮಾಡಿ ಆದೇಶ ಹೊರಡಿಸಿದರು. ಇದನ್ನು ಖಂಡಿಸಿ, ಜೆಡಿಎಸ್ ಮತ್ತು ಬಿಜೆಪಿ ಶಾಸಕರುಗಳು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಸ್ಪೀಕರ್ ಯುಟಿ ಖಾದರ್ ವಿರುದ್ಧ ದೂರು ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಟಿಎ ಶರವಣ ಅವರು,
ಬೆಂಗಳೂರಿನ ನಡೆದ ವಿಪಕ್ಷಗಳ ಸಭೆಗೆ ಆಗಮಿಸಿದ್ದ ಗಣ್ಯರಿಗೆ ಆತಿಥ್ಯ ನೀಡಲು ಐಎಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿ ದುರ್ಬಳಕೆ ಮಾಡಿಕೊಂಡಿರುವುದು ಅಪರಾಧ. ಈ ವಿಚಾರದಲ್ಲಿ ಸರ್ಕಾರ ಕ್ಷಮೆ ಕೇಳಬೇಕು. ಕಾಂಗ್ರೆಸ್ನ ಸರ್ವಾಧಿಕಾರ ಮಾಡುತ್ತಿದೆ. ಪ್ರತಿಯೊಬ್ಬರಿಗೂ ಪ್ರತಿಭಟನೆ ಮಾಡುವ ಪ್ರಶ್ನಿಸುವ ಹಕ್ಕಿದೆ, ಪ್ರಶ್ನಿಸಿದವರ ಮೇಲೆ ಹಲ್ಲೆ ಮಾಡಿರುವುದು, ಅಮಾನತ್ತು ಮಾಡಿರುವುದು ಖಂಡನೀಯ ಎಂದರು.
ಈ ಸಂಬಂಧ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಅವರು ಕ್ರಮ ಕೈಗೊಳ್ಳುವ ವಿಶ್ವಾಸ ಇದೆ ಎಂದು ಟಿಎ ಶರವಣ ಅವರು ಹೇಳಿದ್ದಾರೆ.