ಕೋಲ್ಕತ್ತಾ: ಭಾರತ (India) ಎಂಬ ನಾಮಕರಣವನ್ನು ವಿರೋಧಿಸುವವರು ದಯವಿಟ್ಟು ದೇಶ ತೊರೆಯಬಹುದು ಎಂದು ಪಶ್ಚಿಮ ಬಂಗಾಳ (West Bengal) ಬಿಜೆಪಿ ಸಂಸದ ದಿಲೀಪ್ ಘೋಷ್ (Dilip Ghosh) ಹೇಳಿದ್ದಾರೆ. ಪಶ್ಚಿಮ ಬಂಗಾಳದ ತಮ್ಮ ಲೋಕಸಭಾ ಕ್ಷೇತ್ರದಲ್ಲಿರುವ ಖಾರಗ್ಪುರ ನಗರದಲ್ಲಿ ‘ಚಾಯ್ ಪೆ ಚರ್ಚಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂಡಿಯಾ ಎಂಬ ಹೆಸರನ್ನು ಭಾರತ ಎಂದು ಮರುನಾಮಕರಣ ಮಾಡಲಾಗುವುದು. ಇದನ್ನು ಯಾರೆಲ್ಲ ವಿರೋಧಿಸುತ್ತಾರೋ ಅಥವಾ ಯರಿಗೆಲ್ಲ ಈ ಹೆಸರು ಇಷ್ಟ ಇಲ್ಲವೋ,
ಅವರೆಲ್ಲಾ ಆರಾಮಾಗಿ ದೇಶ ತೊರೆಯಬಹುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಟಿಎಂಸಿ (TMC) ಹಾಗೂ ಸಿಪಿಐ (CPI) ವಿರುದ್ಧವೂ ವಾಗ್ದಾಳಿ ನಡೆಸಿದ ದಿಲೀಪ್, ಟಿಎಂಸಿಯ ನನ್ನ ಸ್ನೇಹಿತರಿಗೆ ‘ಭಾರತ್’ ಅಥವಾ ಇಂಡಿಯಾ ಎಂದು ಏಕೆ ಹೇಳುತ್ತಿದ್ದಾರೆ?, ಅದರ ಹಿಂದಿನ ಇತಿಹಾಸ ಏನು ಎಂದು ತಿಳಿದಿಲ್ಲ. ಸಿಪಿಎಂನವರಿಗೂ ಇದು ತುಂಬಾ ಕಷ್ಟ, ಯಾವಾಗಲೂ ವಿದೇಶಗಳತ್ತ ಗಮನ ಹರಿಸುತ್ತಾರೆ ಎಂದರು.
ಕೋಲ್ಕತ್ತಾದಿಂದ (Kolkata) ವಿದೇಶಿಯರ ಎಲ್ಲಾ ಪ್ರತಿಮೆಗಳನ್ನು ತೆಗೆದುಹಾಕುವುದಾಗಿ ಸಂಸದರು ಭರವಸೆ ನೀಡಿದರು. ಕೋಲ್ಕತ್ತಾದ ಹಲವು ಬೀದಿಗಳಲ್ಲಿ ಬ್ರಿಟಿಷರ ಅನೇಕ ಪ್ರತಿಮೆಗಳು ಇದ್ದವು. ಅವು ಈಗ ಎಲ್ಲಿವೆ? ಬಿಜೆಪಿ ಅಧಿಕಾರಕ್ಕೆ ಬಂದಾಗ ನಾವು ಎಲ್ಲವನ್ನೂ ಕಿತ್ತು ವಿಕ್ಟೋರಿಯಾ ಸ್ಮಾರಕ ಭವನದಲ್ಲಿ ಇಡುತ್ತೇವೆ. ಸಂಗ್ರಹಾಲಯದ ವಸ್ತುಗಳು ಮ್ಯೂಸಿಯಂನಲ್ಲಿ ಉಳಿಯುತ್ತವೆ. ಬೀದಿಗಳಲ್ಲಿ ಅಲ್ಲ. ನಮ್ಮ ಮಕ್ಕಳು ಬೆಳಗ್ಗೆ ಎದ್ದು ವಿದೇಶಿಯರ ಮುಖಗಳನ್ನು ಅನುಸರಿಸದಂತೆ ನೋಡುತ್ತಾರೆ ಎಂದು ದಿಲೀಪ್ ಘೋಷ್ ಹೇಳಿದರು.