ಬದನೆಕಾಯಿ ಉತ್ಕರ್ಷಣ ನಿರೋಧಕವಾಗಿದೆ. ಇದು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಅಸ್ತಮಾ ವಿರೋಧಿ ಸಾಮರ್ಥ್ಯವನ್ನು ಕೂಡ ಬದನೆಕಾಯಿ ಹೊಂದಿದೆ. ಸಾಕಷ್ಟು ಪ್ರಯೋಜ ಹೊಂದಿರುವ ಬದನೆಕಾಯಿಯಲ್ಲೂ ಕೆಟ್ಟ ಗುಣವಿದೆ. ಅಂದ್ರೆ ಇದನ್ನು ಎಲ್ಲರೂ ಸೇವನೆ ಮಾಡಲು ಸಾಧ್ಯವಿಲ್ಲ. ಕೆಲವರು ಬದನೆಕಾಯಿಯಿಂದ ದೂರವಿದ್ರೆ ಒಳ್ಳೆಯದು. ನಾವಿಂದು ಯಾರು ಬದನೆಕಾಯಿ ಸೇವನೆ ಮಾಡ್ಬಾರದು ಎಂಬುದನ್ನು ನಿಮಗೆ ಹೇಳ್ತೇವೆ.
ಬದನೆಕಾಯಿ ಯಾರು ತಿನ್ನಬಾರದು ಗೊತ್ತಾ? :
ಗ್ಯಾಸ್ – ಹೊಟ್ಟೆ ಸಮಸ್ಯೆ ಹೆಚ್ಚಿಸುತ್ತೆ ಬದನೆ : ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆಯಿದ್ದರೆ ಅಥವಾ ಹೊಟ್ಟೆ ಉಬ್ಬರ, ಹೊಟ್ಟೆ ನೋವಿನಂತ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ಬದನೆಕಾಯಿ ಸೇವನೆ ಮಾಡದಿರುವುದು ಒಳ್ಳೆಯದು. ಇದು ನಿಮ್ಮ ಗ್ಯಾಸ್ಟ್ರಿಕನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.
ಅಲರ್ಜಿ ಇರೋರು ತಿನ್ಬೇಡಿ : ಚರ್ಮದ ಅಲರ್ಜಿ ನಿಮಗಿದ್ದರೆ ನೀವು ಬದನೆಕಾಯಿ ಸೇವನೆ ಮಾಡಲು ಹೋಗ್ಬೇಡಿ. ಬದನೆಕಾಯಿ ನಿಮ್ಮ ಚರ್ಮದ ಅಲರ್ಜಿಯನ್ನು ಹೆಚ್ಚಿಸುತ್ತದೆ. ಇದ್ರಿಂದ ನೀವು ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ.
ಖಿನ್ನತೆ ಉಲ್ಬಣ : ನೀವು ಖಿನ್ನತೆಗೆ ಒಳಗಾಗಿದ್ದು, ಅದಕ್ಕೆ ಸಂಬಂಧಿಸಿದ ಮಾತ್ರೆ ಅಥವಾ ಔಷಧಿ ಸೇವನೆ ಮಾಡ್ತಿದ್ದರೆ ಬದನೆಕಾಯಿ ಸೇವನೆ ಮಾಡುವ ಸಹವಾಸಕ್ಕೆ ಹೋಗ್ಬೇಡಿ. ಬದನೆಕಾಯಿ ನಿಮ್ಮ ಔಷಧಿ ಪರಿಣಾಮವನ್ನು ಕಡಿಮೆ ಮಾಡುತ್ತದೆ. ನೀವು ಖಿನ್ನತೆ ಕಡಿಮೆಯಾಗಲು ಔಷಧಿ ತೆಗೆದುಕೊಳ್ಳುತ್ತಿದ್ದು ಜೊತೆಗೆ ಬದನೆಕಾಯಿ ಸೇವನೆ ಮಾಡ್ತಿದ್ದರೆ ಖಿನ್ನತೆ ಕಡಿಮೆಯಾಗುವ ಬದಲು ಹೆಚ್ಚಾಗುವ ಅಪಾಯವಿರುತ್ತದೆ.
ರಕ್ತಹೀನತೆ : ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ಬದನೆಕಾಯಿ ತಿನ್ನಬೇಡಿ. ಬದನೆಕಾಯಿ ರಕ್ತವನ್ನು ಉತ್ಪಾದಿಸಲು ಅಡ್ಡಿಯುಂಟು ಮಾಡುವ ಸಾಧ್ಯತೆಯಿರುತ್ತದೆ.
ಕಣ್ಣು ಉರಿ : ನಿಮಗೆ ಕಣ್ಣಿನಲ್ಲಿ ಉರಿ ಕಾಣಿಸಿಕೊಳ್ಳುತ್ತಿದ್ದರೆ ಇಲ್ಲವೆ ನಿಮ್ಮ ಕಣ್ಣು ಊದಿಕೊಂಡಿದ್ದರೆ ನೀವು ಬದನೆಕಾಯಿ ತಿನ್ನಲು ಹೋಗಬೇಡಿ. ಇದ್ರಿಂದ ಸಮಸ್ಯೆ ಹೆಚ್ಚಾಗುವ ಅಪಾಯವಿರುತ್ತದೆ.
ಮೂಲವ್ಯಾಧಿ : ಹೇಳಿಕೊಳ್ಳಲಾಗದ ಭಯಾನಕ ಸಮಸ್ಯೆಗಳಲ್ಲಿ ಒಂದಾಗಿರುವ ಮೂಲವ್ಯಾಧಿ ನಿಮ್ಮನ್ನು ಬಾಧಿಸುತ್ತಿದ್ದರೆ ನೀವು ಬದನೆಕಾಯಿ ಸೇವನೆಯಿಂದ ಹಿಂದೆ ಸರಿಯಿರಿ. ನಿಮ್ಮ ಮೂಲವ್ಯಾಧಿಯನ್ನು ಬದನೆಕಾಯಿ ಹೆಚ್ಚಿಸುವ ಗುಣ ಹೊಂದಿದೆ.