ಕಿಚ್ಚ ಸುದೀಪ್ ಅವರು ಬಿಜೆಪಿ ಪರ ಪ್ರಚಾರ ಮಾಡಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಈ ಬಗ್ಗೆ ಇಂದು (ಏಪ್ರಿಲ್ 5) ಮಧ್ಯಾಹ್ನ ಸ್ಪಷ್ಟ ಚಿತ್ರಣ ಸಿಗಲಿದೆ. ಈ ಮಧ್ಯೆ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಎರಡು ಬೆದರಿಕೆ ಪತ್ರ ಬಂದಿದೆ. ಇದರಲ್ಲಿ ಕಿಚ್ಚ ಸುದೀಪ್ ಅವರ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ಈ ಸಂಬಂಧ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಪತ್ರ ಕಳುಹಿಸಿದ್ದು ಯಾರು ಎನ್ನುವ ಹುಡುಕಾಟ ನಡೆಯುತ್ತಿದೆ.
ಸುದೀಪ್ ಅವರ ಮ್ಯಾನೇಜರ್ ಜಾಕ್ ಮಂಜುಗೆ ಈ ಪತ್ರ ಸಿಕ್ಕಿದೆ ಎನ್ನಲಾಗಿದೆ. ಈ ಪತ್ರದಲ್ಲಿ ಸುದೀಪ್ ಬಗ್ಗೆ ಕೆಟ್ಟ ಪದಗಳ ಬಳಕೆ ಆಗಿದೆ. ಸುದೀಪ್ ಅವರ ಖಾಸಗಿ ವಿಡಿಯೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಲಾಗಿದೆ. ಇದರಿಂದ ಸುದೀಪ್ಗೆ ಮಾನಸಿಕ ಕಿರುಕುಳ ಆಗಿದೆ. ‘ನಟನ ಘನತೆಗೆ ಧಕ್ಕೆ ತರಲು ಮಾಡಿರೋ ಸಂಚು’ ಎಂದು ಮಂಜು ಅವರು ದೂರಿದ್ದಾರೆ.
ಸದ್ಯ ಪುಟ್ಟೇನಹಳ್ಳಿ ಪೊಲೀಸರು ಐಪಿಸಿ ಸೆಕ್ಷನ್ 506, ಸೆಕ್ಷನ್ 504 ಅಡಿಯಲ್ಲಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಈ ಪತ್ರ ಎಲ್ಲಿಂದ ಬಂತು, ಯಾರು ಕಳುಹಿಸಿದ್ದು ಎನ್ನುವ ತನಿಖೆ ನಡೆಯುತ್ತಿದೆ. ಈ ಪ್ರಕರಣವನ್ನು ಸಿಸಿಬಿಗೆ ವಹಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇಂದು ಮಧ್ಯಾಹ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುದ್ದಿಗೋಷ್ಠಿ ಕರೆದಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಸುದೀಪ್ ಕೂಡ ಭಾಗವಹಿಸುವ ಸಾಧ್ಯತೆ ಇದೆ. ಖಾಸಗಿ ಹೋಟೆಲ್ನಲ್ಲಿ ಈ ಪ್ರೆಸ್ಮೀಟ್ ನಡೆಯಲಿದೆ. ಸುದ್ದಿಗೋಷ್ಠಿ ವೇಳೆ ಸುದೀಪ್ ಅವರು ಬಿಜೆಪಿಗೆ ಬೆಂಬಲ ಸೂಚಿಸುವ ಸಾಧ್ಯತೆ ಇದೆ. ಆದರೆ, ಅವರು ಪಕ್ಷ ಸೇರುತ್ತಾರೆ ಎಂಬುದು ಬಹುತೇಕ ಅನುಮಾನವೇ ಈ ಬಗ್ಗೆ ಇಂದು ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದೆ.