ಬೆಂಗಳೂರು:- ಟೆಕ್ಕಿಗಳನ್ನೇ ಟಾರ್ಗೆಟ್ ಮಾಡಿ ಸುಲಿಗೆ ಮಾಡ್ತಿದ್ದ ಮೂವರನ್ನು ಅರೆಸ್ಟ್ ಮಾಡಲಾಗಿದೆ.
ಸಾಫ್ಟ್ವೇರ್ ಇಂಜಿನಿಯರ್ ಚರಣ್ ಪಾಲ್ ಸಿಂಗ್ ಎಂಬುವರು ಭಾನುವಾರ ಸಂಜೆ ಸಹೋದ್ಯೋಗಿಗಳೊಂದಿಗೆ ಸರ್ಜಾಪುರ-ಅತ್ತಿಬೆಲೆ ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ಸ್ಕೂಟರ್ನಲ್ಲಿ ಬಂದ ನಾಲ್ವರು ಕಾರಿಗೆ ಅಡ್ಡ ಹಾಕಿದ್ದಾರೆ.
ಬಳಿಕ ‘ನಮ್ಮ ಬೈಕ್ಗೆ ಡಿಕ್ಕಿ ಹೊಡೆದಿದ್ದೀರಿ ಹಣ ನೀಡಿ’ ಎಂದು ಚರಣ್ ಪಾಲ್ ಸಿಂಗ್ ಅವರ ಬಳಿ ಬಂದಿದ್ದಾರೆ. ಚರಣ್ ಪಾಲ್ ಸಿಂಗ್ ಅವರು ಕಾರಿನಲ್ಲೇ ಕೂತಿದ್ದು, ‘ನಾವು ಯಾವುದೇ ಅಪಘಾತ ಮಾಡಿಲ್ಲ’ ಎಂದಿದ್ದಾರೆ. ನಂತರ ಚರಣ್ ಪಾಲ್ ಸಿಂಗ್ ಅವರು ಕಾರಿನ ಗಾಜುಗಳನ್ನು ಹಾಕಿದ್ದಾರೆ. ಅದಕ್ಕೆ ದುಷ್ಕರ್ಮಿಗಳು ಗಾಜು ಇಳಿಸುವಂತೆ ಹೇಳಿದ್ದಾರೆ. ಆದರೆ ಚರಣ್ ಪಾಲ್ ಸಿಂಗ್ ಗಾಜು ಇಳಿಸಿಲ್ಲ.
ಆಗ ದುಷ್ಕರ್ಮಿಗಳು ಕಾರಿನ ಗಾಜುನ್ನು ಹೊಡೆದು ಬೆದರಿಕೆ ಹಾಕಲು ಮುಂದಾಗಿದ್ದಾರೆ. ಆದರೂ ಕೂಡ ಚರಣ್ ಪಾಲ್ ಸಿಂಗ್ ವಾಹನದಿಂದ ಇಳಿಯದೆ ಕಾರನ್ನು ಚಾಲು ಮಾಡಿ ವೇಗವಾಗಿ ಓಡಿಸುತ್ತಾ ಹತ್ತಿರದ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಆರೋಪಿಗಳು ವಾಹನವನ್ನು ಹಿಂಬಾಲಿಸಿದ್ದಾರೆ. ಇಡೀ ಘಟನೆ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ
ಇನ್ನು ಪೊಲೀಸ್ ಠಾಣೆಯಲ್ಲಿ ಚರಣ್ ಪಾಲ್ ಸಿಂಗ್ ದೂರು ನೀಡಿದ್ದಾರೆ. ಬಳಿಕ ಪೊಲೀಸರ ಪರಿಶೀಲಿಸಿದಾಗ ಚರಣ್ ಪಾಲ್ ಸಿಂಗ್ ಅಪಘಾತ ಮಾಡಿಲ್ಲವೆಂದು ಕಂಡುಕೊಂಡರು. ನಂತರ ಪೊಲೀಸರು ಪ್ರಕರಣದ ತನಿಖೆ ನಡೆಸಿ ಮೂವರು ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.