ಟಾಷ್ಕೆಂಟ್: ಈ ಭಾರಿಯ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ನಲ್ಲಿ ಭಾರತ ಮೂರು ಕಂಚಿನ ಪದಕಗಳಿಗೆ ಸಮಾಧಾನಪಟ್ಟುಕೊಂಡಿದೆ.
ಭಾರತದ ಮೊಹಮ್ಮದ್ ಹುಸ್ಸಮುದ್ದೀನ್, ದೀಪಕ್ ಕುಮಾರ್ ಭೋರಿಯಾ ಮತ್ತು ನಿಶಾಂತ್ ದೇವ್ ಕಂಚಿನ ಪದಕ ತಂದುಕೊಟ್ಟಿದ್ದಾರೆ. ಇದೇ ಮೊದಲ ಭಾರಿಗೆ ವಿಶ್ವ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಸ್ಪರ್ಧೆಗೆ ಇಳಿದ ಮೊಹಮ್ಮದ್ ಹುಸ್ಸಮುದ್ದೀನ್ ಗಾಯಾಳಾಗಿ ಸೈಮಿಫೈನಲ್ ಸ್ಪರ್ಧೆಯಿಂದ ಹಿಂದೆ ಸರಿದರು. ಕ್ವಾರ್ಟರ್ ಫೈನಲ್ ದಾಟಿದ ಸಾಧನೆಯಿಂದಾಗಿ ಅವರಿಗೆ ಕಂಚಿನ ಪದಕ ಲಭಿಸಿತು.
29 ವರ್ಷದ, ನಿಜಾಮಾಬಾದ್ ಮೂಲದ ಬಾಕ್ಸರ್ ಹುಸ್ಸಮುದ್ದೀನ್ ಸೆಮಿಫೈನಲ್ನಲ್ಲಿ (57 ಕೆಜಿ ವಿಭಾಗ) ಕ್ಯೂಬಾದ ಸೈದೆಲ್ ಹೋರ್ಟ ರಾಡ್ರಿಗೆಝ್ ಡೆಲ್ ರೇ ಅವರನ್ನು ಎದುರಿಸಬೇಕಿತ್ತು. ಆದರೆ ಕ್ವಾರ್ಟರ್ ಫೈನಲ್ ವೇಳೆ ಕಾಡಿದ ಮಂಡಿನೋವಿನಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು. ಮುಂದೆ ಸ್ಪರ್ಧಿಸದಂತೆ ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ಕೂಡ ಅವರಿಗೆ ಸೂಚನೆ ನೀಡಿತ್ತು.
ಇನ್ನೊಂದು ಸೆಮಿಫೈನಲ್ನಲ್ಲಿ ದೀಪಕ್ ಭೋರಿಯಾ (51 ಕೆಜಿ) ಫ್ರಾನ್ಸ್ನ ಬಿಲಾಲ್ ಬೆನ್ನಮ ವಿರುದ್ಧ 3-4 ಅಂತರದ ಸೋಲುಂಡರು. ನಿಶಾಂತ್ ದೇವ್ (71 ಕೆಜಿ) ಕಜಾಕ್ಸ್ಥಾನದ ಅಸ್ಲಾಂಬೆಕ್ ಶಿಂಬರ್ಗೆನೋವ್ ವಿರುದ್ಧ ಎಡವಿದರು.