ಚಂಡೀಗಢ: ಇಲ್ಲಿನ ಮುನ್ಸಿಪಲ್ ಕಾರ್ಪೊರೇಷನ್ನ ಮೂವರು ಆಮ್ ಆದ್ಮಿ ಪಕ್ಷದ (AAP) ಕೌನ್ಸಿಲರ್ ಗಳು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕೌನ್ಸಿಲರ್ಗಳಾದ ಪೂನಂ ದೇವಿ, ನೇಹಾ ಮುಸಾವತ್ ಮತ್ತು ಗುರ್ಚರಣ್ ಕಲಾ ಅವರು ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರ ಸಮ್ಮುಖದಲ್ಲಿ ಬಿಜೆಪಿಗೆ (BJP) ಸೇರ್ಪಡೆಯಾದರು. ಚುನಾವಣೆಯಲ್ಲಿ ಅಕ್ರಮಗಳ ಆರೋಪದ ನಂತರ ಹೊಸದಾಗಿ ಚುನಾಯಿತರಾದ ಮೇಯರ್ ಮನೋಜ್ ಸೋಂಕರ್ ಅವರು ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನವೇ ಈ ಬೆಳವಣಿಗೆ ನಡೆದಿದೆ.
ಈ ಕುರಿತು ಪ್ರತಿಕ್ರಿಯಿಸಿದ ನೇಹಾ ಮುಸಾವತ್, ಎಎಪಿ ನಮಗೆ ಸುಳ್ಳು ಭರವಸೆಗಳನ್ನು ನೀಡಿದೆ. ಇಂದು, ಪ್ರಧಾನಿ ಮೋದಿಯವರ (Narendra Modi) ಕೆಲಸ- ಕಾರ್ಯಗಳಿಂದ ಪ್ರೇರಿತವಾಗಿ ಬಿಜೆಪಿಗೆ ಸೇರಿದ್ದೇನೆ ಎಂದು ಹೇಳಿದರು. ಇನ್ನು ಪ್ರಧಾನಿ ಮೋದಿಯವರು ಮಾಡಿದ ಕೆಲಸಗಳಿಂದ ಸ್ಫೂರ್ತಿ ಪಡೆದು ಬಿಜೆಪಿಗೆ ಸೇರಿದ್ದಾಗಿ ತಿಳಿಸಿದ ಪೂನಂ ದೇವಿ, ಎಎಪಿಯನ್ನು ನಕಲಿ ಪಕ್ಷ ಎಂದು ಕರೆದರು.
ಜನವರಿ 30 ರಂದು ನಡೆದ ಮೇಯರ್ ಚುನಾವಣೆಗೆ ಇಂಡಿಯಾ ಮೈತ್ರಿಕೂಟ ಪ್ರತಿನಿಧಿಸಿದ್ದ ಎಎಪಿ ಮತ್ತು ಕಾಂಗ್ರೆಸ್ ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದವು. ತೀವ್ರ ಪೈಪೋಟಿ ನಡೆದ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಕುಲದೀಪ್ ಸಿಂಗ್ ಅವರ 8 ಮತಗಳು ಅಸಿಂಧುಗೊಂಡಿದ್ದರಿಂದ ಬಿಜೆಪಿ ಅಭ್ಯರ್ಥಿ ಮನೋಜ್ ಸೋಂಕರ್ ಅವರನ್ನು ವಿಜಯಿ ಎಂದು ಘೋಷಿಸಲಾಯಿತು.