ಯಾದಗಿರಿ: ಜಿಲ್ಲೆಯ ಅನಪುರದಲ್ಲಿ ಕಲುಷಿತ ನೀರು (Polluted Water) ಕುಡಿದು ಮೂವರ ಸಾವು ಪ್ರಕರಣದಲ್ಲಿ ಮಲ ಮಿಶ್ರಿತ ನೀರೇ ಘಟನೆಗೆ ಕಾರಣ ಎನ್ನುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಯಾದಗಿರಿ (Yadgir) ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೂವರು ಮೃತಪಟ್ಟಿದ್ದರೇ, 90ಕ್ಕೂ ಹೆಚ್ಚು ಜನ ವಾಂತಿ, ಬೇಧಿಯಿಂದ ನಿರ್ಜಲೀಕರಣಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡು ಕೆಲವರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇಡೀ ಘಟನೆಗೆ ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎನ್ನುವುದು ಆರಂಭದಿಂದಲೂ ಹೇಳಲಾಗುತ್ತಿತ್ತು. ಆದರೆ ಅದಕ್ಕೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಲ ಮಿಶ್ರಿತ ನೀರನ್ನು ಗ್ರಾಮಸ್ಥರ ಮನೆಗಳಿಗೆ ಸರಬರಾಜು ಮಾಡಿದ್ದು ಖಚಿತವಾಗಿದೆ.
ನಿರ್ಜಲೀಕರಣಕ್ಕೆ ಒಳಗಾಗಿದ್ದ ಐವರು ಅಸ್ವಸ್ಥರ ಸ್ಟೂಲ್ ಸ್ಯಾಂಪಲ್ ಸಂಗ್ರಹ ಮಾಡಲಾಗಿತ್ತು. ಸ್ಟೂಲ್ ಸ್ಯಾಂಪಲ್‌ನಲ್ಲಿ ಮಲ ಮಿಶ್ರಿತ, ಈಕೊಲೈ ಬ್ಯಾಕ್ಟಿರಿಯಾ ಸೇರಿಕೊಂಡಿದ್ದು ಪತ್ತೆಯಾಗಿದ್ದು, ದನಕರುಗಳು ಕುಡಿಯಲು ಯೋಗ್ಯವಿರದ ನೀರನ್ನು ಅನಪುರ ಗ್ರಾಮಸ್ಥರು ಕುಡಿದಿರುವುದು ಪತ್ತೆಯಾಗಿದೆ. ಗ್ರಾಪಂ ಅಧಿಕಾರಿಗಳು ಲೀಕ್ ಆದ ಪೈಪ್ ಲೈನ್ ನಿರ್ವಹಣೆ ಮಾಡದ್ದಕ್ಕೆ ಮಲ ಮಿಶ್ರಿತ ನೀರು ಪೂರೈಕೆ ಆಗಿದೆ. ಹೀಗಾಗಿ ಅಧಿಕಾರಿಗಳ ಬೇಜವಾಬ್ದಾರಿಯೇ ಇಡೀ ಘಟನೆಗೆ ಕಾರಣ ಎನ್ನುವುದು ಖಚಿತ ಆಗಿರುವುದರಿಂದ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಸೆಕ್ರೆಟರಿ, ವಾಟಮನ್ ಸೇರಿದಂತೆ ಸಿಬ್ಬಂದಿ ವಿರುದ್ಧ ಪ್ರಕರಣವೂ ದಾಖಲಾಗಿದೆ.
ಇಂಥ ಮಹಾದುರಂತ ಸಂಭವಿಸಿದ್ರೂ ಸರ್ಕಾರ ಮಾತ್ರ ಇದುವರೆಗೂ ಕಣ್ಣು, ಕಿವಿ ತೆರೆಯದೇ ಗಾಢ ನಿದ್ರೆಯಲ್ಲಿರುವುದು ವಿಪರ್ಯಾಸ. ಯಾಕಂದ್ರೆ ಘಟನೆ ನಡೆದು ಈಗಾಗಲೇ ವಾರ ಕಳೆದ್ರೂ ಸರ್ಕಾರದಿಂದ ಮೃತಪಟ್ಟವರಿಗೆ ನಯಾಪೈಸೆ ಪರಿಹಾರ ಘೋಷಣೆ ಮಾಡಿಲ್ಲ. ಹೀಗಾಗಿ ಸರ್ಕಾರಕ್ಕೆ ಕಲ್ಯಾಣ ಕರ್ನಾಟಕ ಭಾಗ ಅಂದ್ರೆ ಯಾಕಿಷ್ಟು ನಿರ್ಲಕ್ಷ್ಯ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಲುಷಿತ ನೀರಿನಿಂದಲೇ ಮೂವರು ಮೃತಪಟ್ಟಿರುವ ವರದಿ ಬಂದಿದ್ದರೂ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವ್ರೂ ಸಹಿತ ಕನಿಷ್ಠ ಸೌಜನ್ಯಕ್ಕಾದ್ರೂ ಜಿಲ್ಲೆಗೆ ಬಂದು ಸಭೆ ನಡೆಸಿಲ್ಲ. ಇನ್ನೂ ಆಸ್ಪತ್ರೆಗಳಲ್ಲಿ ಹತ್ತಾರು ಜನ ನಿರ್ಜಲೀಕರಣಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರೂ ಡೋಂಟ್ ಕೇರ್ ಎಂದ ಸಚಿವರು, ಮಹಾದುರಂತ ಸಂಭವಿಸಿದ್ರೂ ಯಾರ ಮೇಲೂ ಕ್ರಮ ಕೈಗೊಳ್ಳುವ ಗೋಜಿಗೂ ಹೋಗಿಲ್ಲ. ಇತ್ತ ಯಾದಗಿರಿ ಜಿಲ್ಲಾಧಿಕಾರಿಗಳೂ ಘಟನೆಗೆ ಕಾರಣರಾದ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಜನ ಸರ್ಕಾರ, ಸಚಿವರು ಮತ್ತು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಡೀ ಘಟನೆಗೆ ಗ್ರಾಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೇಜವಾಬ್ದಾರಿಯೇ ಕಾರಣ ಎನ್ನುವುದು ಈಗಾಗಲೇ ದೃಢಪಟ್ಟಿದೆ. ಹೀಗಾಗಿ ಸರ್ಕಾರ ಮೃತರ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡಿ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.