2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶದಲ್ಲಿನ ಸತ್ಖೀರದ ಶ್ಯಾಮನಗರದಲ್ಲಿರುವ ಜೆಶೋರೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೇವಿಗೆ ಕಾಣಿಕೆಯಾಗಿ ಬಂಗಾರ ಹಾಗೂ ಬೆಳ್ಳಿಯಿಂದ ಮಾಡಿದ್ದ ಕಿರೀಟವನ್ನು ಪ್ರಧಾನಿ ನೀಡಿದ್ದರು. ಇದೀಗ ಆ ಕಿರೀಟ ಕಳ್ಳತನವಾಗಿದೆ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಎಂದಿನಂತೆ ದೇವಸ್ಥಾನದ ಅರ್ಚಕರು ಪೂಜೆ ಮಾಡಿ ತೆರಳಿದ್ದಾರೆ. ಇದಾದ ಬಳಿಕ ದುಷ್ಕರ್ಮಿಗಳು ಮಧ್ಯಾಹ್ನ 2.00 ರಿಂದ 2.30ರ ನಡುವೆ ಈ ಕಿರೀಟ ಕಳ್ಳತನ ಮಾಡಿದ್ದಾರೆ. ದೇಗುಲದ ಸ್ವಚ್ಛತಾ ಸಿಬ್ಬಂದಿ ದೇವಿಯ ಕಿರೀಟ ಕಾಣೆಯಾಗಿರುವುದನ್ನು ಮೊದಲು ಪತ್ತೆ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿಯಲ್ಲಿ ಉಲ್ಲೇಖಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇನ್ಸ್ಪೆಕ್ಟರ್ ತೈಜುಲ್ ಇಸ್ಲಾಮ್, ದೇಗುಲದ ಸಿಸಿಟಿವಿ ಫೂಟೇಜ್ ತರಸಿಕೊಂಡು ಕಳ್ಳರ ಪತ್ತೆ ಮಾಡುತ್ತಿದ್ದೇವೆ. ಕಳುವಾಗಿರುವ ಕೀರಿಟವನ್ನು ಬೆಳ್ಳಿ ಮತ್ತು ಬಂಗಾರದಿಂದ ಮಾಡಲಾಗಿದ್ದು, ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಪ್ರತೀಕವಾಗಿ ಇದನ್ನು ಸಮರ್ಪಣೆ ಮಾಡಲಾಗಿತ್ತು ಎಂದಿದ್ದಾರೆ.
ಹಿಂದೂ ಪುರಾಣದ ಪ್ರಕಾರ, ಜೆಶೋರೇಶ್ವರಿ ದೇಗುಲವೂ ದೇವಿಯ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಜೆಶೋರೇಶ್ವರಿ ಎಂದರೆ ಜೆಶೋರ್ ದೇವತೆ ಎಂಬುದಾಗಿದೆ. 2021ರಲ್ಲಿ ಬಾಂಗ್ಲಾದೇಶ ಪ್ರವಾಸ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 27ರಂದು ಈ ದೇಗುಲಕ್ಕೆ ಭೇಟಿ ನೀಡಿದ್ದರು.