ಚಿಕ್ಕೋಡಿ (ಬೆಳಗಾವಿ): ರಾಜ್ಯ ಬಿಜೆಪಿ ಸರ್ಕಾರ ರಚನೆಗೆ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದ ವಲಸಿಗ ಶಾಸಕರ ಸ್ಥಿತಿ ಸಧ್ಯ ಅತಂತ್ರವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಚುನಾವಣೆ ಬರುವವರೆಗೂ ಸುಮ್ಮನಿದ್ದ ಮೂಲ ಬಿಜೆಪಿಗರು ಈಗ ಬಹಿರಂಗವಾಗಿಯೇ ವಲಸಿಗ ಶಾಸಕರಿಗೆ ಸವಾಲು ಹಾಕಲು ಆರಂಭಿಸಿದ್ದು, ಬಿಜೆಪಿ ಪಾಳಯದಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಹೌದು. ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ರಾಜ್ಯ ರಾಜಕಾರಣ ಗರಿಗೆದರಿದ್ದು ಅದರಲ್ಲೂ ಬೆಳಗಾವಿ ರಾಜಕಾರಣ ಬಾರಿ ಸದ್ದು ಮಾಡುತ್ತಿದೆ. ಬಿಜೆಪಿಯಲ್ಲಿ ಎಲ್ಲವೂ ಸರಿ ಇದೆ ಎಂದು ಬಿಂಬಿಸುತ್ತಿರುವ ರಾಜ್ಯ ನಾಯಕರಿಗೆ ಮುಜುಗರವಾಗುವಂತೆ ಅಥಣಿ ಬಿಜೆಪಿಯಲ್ಲಿ ಅಸಮಾಧಾನದ ಜ್ವಾಲಾಮುಖಿಯ ಸ್ಫೋಟಗೊಂಡಿದೆ. ಅಥಣಿ ವಿಧಾನಸಭಾ ಕ್ಷೇತ್ರ ಪ್ರಭಾವಿ ರಾಜಕಾರಣಿಯಾದ ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ್ ಸವದಿ ಅವರ ಸ್ವಕ್ಷೇತ್ರ ವಾಗಿದ್ದು ಅವರದೇ ಕ್ಷೇತ್ರದಲ್ಲಿ ಸದ್ಯ ಈಗ ಬಿಜೆಪಿಯಲ್ಲಿ ಆಂತರಿಕವಾಗಿ ಇಬ್ಬರ ನಾಯಕರಿಗೆ ಬಿ ಫಾರ್ಮ್ ವಿಚಾರವಾಗಿ ಅಸಮಾಧಾನ ಬಹಿರಂಗಗೊಂಡಿದೆ. ಹಾಲಿ ಶಾಸಕ ಮಹೇಶ್ ಕುಮಠಳ್ಳಿ ಮತ್ತು ಮಾಜಿ ಶಾಸಕ ಲಕ್ಷ್ಮಣ್ ಸವದಿ ಅವರಿಗೆ ಟಿಕೆಟ್ ವಿಚಾರವಾಗಿ ಕಳೆದ ಐದು ವರ್ಷದ ಹಿಂದಿನಿಂದಲೂ ತಿಕ್ಕಾಟ ನಡೆಯುತ್ತಿದ್ದು ಚುನಾವಣೆ ಸಮೀಪಿಸುತ್ತಿದ್ದಂತೆ ಅಥಣಿ ಬಿಜೆಪಿಯಲ್ಲಿ ಆಂತರಿಕ ಕಲಹ ಜಗತ್ತು ಜಾಹೀರಾತಾಗಿದೆ. ಕಾರ್ಯಕ್ರಮ ಒಂದರಲ್ಲಿ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಅಥಣಿ ಕ್ಷೇತ್ರದಿಂದ ಈ ಬಾರಿ ನಮ್ಮ ತಂದೆ ಸ್ಪರ್ಧೆ ಮಾಡುತ್ತಾರೆ. ಅಥಣಿ ಕ್ಷೇತ್ರವನ್ನು ಬಿಟ್ಟುಕೊಡುವ ಮಾತೇ ಇಲ್ಲ ಎಂದು ಹೈಕಮಾಂಡಿಗೆ ಸಂದೇಶ ಸಾರುವ ಮುಖಾಂತರ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ.
2019ರಲ್ಲಿ ರಾಜಕೀಯ ಬದಲಾವಣೆ ಸನ್ನಿವೇಶದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷದ ಜೊತೆ ಸೇರಿ ಶಾಸಕ ಮಹೇಶ್ ಕುಮಠಳ್ಳಿ ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಪಾತ್ರವನ್ನು ವಹಿಸಿದ್ದರು. ಈ ರಾಜಕೀಯ ಬದಲಾವಣೆಯಲ್ಲಿ ಲಕ್ಷ್ಮಣ ಸವದಿ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟು ಮಹೇಶ್ ಕುಮಠಳ್ಳಿ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಅಥಣಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಮಾಡಿದ್ದರು. ಎಲ್ಲೋ ಒಂದು ಕಡೆ ಅವತ್ತಿನಿಂದ ಇವತ್ತಿನವರೆಗೂ ಲಕ್ಷ್ಮಣ್ ಸವದಿ ಹಾಗೂ ಅವರ ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು, ಕಳೆದ ನಾಲ್ಕೂವರೆ ವರ್ಷದಿಂದ ಮೂಲ ಬಿಜೆಪಿ, ವಹಿಸಿಗರ ಬಿಜೆಪಿ ಎಂಬ ಕಾರ್ಯಕರ್ತರಲ್ಲಿ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಕಚ್ಚಾಟವು ಕೂಡ ನಡೆಯುತ್ತಿತ್ತು. ಇದರ ನಡುವೆ ಲಕ್ಷ್ಮಣ್ ಸವದಿ ಹೆಚ್ಚಾಗಿ ಮಹೇಶ್ ಕುಮಠಳ್ಳಿ ಜೊತೆ ಕಾಣಿಸದೆ ಇರುವುದು ಅಥಣಿ ಬಿಜೆಪಿಯಲ್ಲಿ ತೆರೆಮರೆ ಹಿಂದೆ ಯಾವುದು ಸರಿ ಇಲ್ಲ ಎಂಬುವುದು ಸ್ಪಷ್ಟವಾಗಿ ದೊರಕುತ್ತಿತ್ತು.
ಹಲವಾರು ಬಾರಿ ಅಥಣಿ ಬಿಜೆಪಿ ಅಸಮಾಧಾನ ಬಗ್ಗೆ ಮಾಧ್ಯಮಗಳು ಲಕ್ಷ್ಮಣ್ ಸವದಿ ಅವರನ್ನು ಪ್ರಶ್ನಿಸಿದಾಗ ನಾನು ಬಿಜೆಪಿಯ ಶಿಸ್ತಿನ ಸಿಪಾಯಿ, 2018ರ ಚುನಾವಣೆಯಲ್ಲಿ ಸೋತರು ನನ್ನನ್ನು ಡಿಸಿಎಂ ಎಂದು ಪಕ್ಷ ಎತ್ತಿ ಹಿಡಿದಿದೆ. ಪಕ್ಷದ ವರಿಷ್ಠರು ಹೇಗೆ ಹೇಳುತ್ತಾರೆ ಹಾಗೆ ನಾನು ಕೇಳುತ್ತೇನೆ ಅಥಣಿ ಟಿಕೆಟ್ ಆಕಾಂಕ್ಷಿ ಅಲ್ಲವೆಂದು ಲಕ್ಷ್ಮಣ್ ಸವದಿ ಸಮಜಾಯಿಸಿಕೊಡುತ್ತಿದ್ದರು. ಆದರೆ ಇವತ್ತು ಅವರ ಪುತ್ರ ಚಿದಾನಂದ್ ಸವದಿ ರಮೇಶ್ ಜಾರಕಿಹೊಳಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿ ತಮ ಆತ್ಮೀಯ ಮಹೇಶ್ ಕುಮಠಳ್ಳಿಗೆ ಗೋಕಾಕ್ ಮತಕ್ಷೇತ್ರವನ್ನು ಬಿಟ್ಟು ಕೊಡಲಿ. ನಾವು ಮಾತ್ರ ಅಥಣಿ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತೇವೆ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಸಮರ ಸಾರಿದ್ದಾರೆ.
ಮೊನ್ನೆ ಅಷ್ಟೇ ರಮೇಶ್ ಜಾರಕಿಹೊಳಿ ವಿಜಯಪುರದಲ್ಲಿ ಮಾಧ್ಯಮ ಜೊತೆ ಮಾತನಾಡುತ್ತಾ ಆಪ್ತಮಿತ್ರನಿಗೆ ಅಥಣಿ ಟಿಕೆಟ್ ಕೊಡಿಸುತ್ತೇನೆ. ಅವನಿಗೂ ಟಿಕೆಟ್ ಇಲ್ಲ ಅಂದ್ರೆ ನಾನು ಗೋಕಾಕ್ನಿಂದ ಸ್ಪರ್ಧೆ ಮಾಡೋದಿಲ್ಲ ಎಂದು ಬಿಜೆಪಿ ಹೈಕಮಾಂಡ್ಗೆ ಸಂದೇಶ ರವಾನಿಸುತ್ತಿದ್ದಂತೆ, ಸದ್ದಿಲ್ಲದೆ ಚುನಾವಣೆಗೆ ತಯಾರಿ ನಡೆಸುತ್ತಿದ್ದ ಸವದಿ ಕುಟುಂಬಕ್ಕೆ ಗೋಕಾಕ್ ಸಾಹುಕಾರ ಮಾತು ನುಂಗಲಾರದ ತುತ್ತಾಗಿದೆ. ಶತಾಯಗತಾಯವಾಗಿ ಅಥಣಿ ಕ್ಷೇತ್ರವನ್ನು ಮರಳಿ ಪಡೆಯುವ ಬೇಕೆಂಬ ಪಣತೊಟ್ಟಂತೆ ಕಾಣುತ್ತಿದ್ದು ಸದ್ಯ ಚಿದಾನಂದ ಸವದಿ ಬಿಜೆಪಿ ಹೈಕಮಾಂಡಿಗೆ ಇವತ್ತು ಸವಾಲೆಸಗಿದ್ದಾರೆ. ಇದು ಯಾವ ಹಂತಕ್ಕೆ ಹೋಗುತ್ತದೆಯೋ ಅಥವಾ ಲಕ್ಷ್ಮಣ ಸವದಿ ಮಗನನ್ನು ಕರೆದು ಬುದ್ಧಿವಾದ ಹೇಳುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ. ಒಟ್ಟಾರೆಯಾಗಿ ಅಥಣಿ ವಿಧಾನಸಭೆ ಕ್ಷೇತ್ರದ ಪ್ರತಿಕ್ಷಣವೂ ತಿರುಪಡೆದುಕೊಳ್ಳುತ್ತಿದ್ದು ಹೈಕಮಾಂಡ್ ಇಲ್ಲಿ ಯಾರಿಗೆ ಟಿಕೆಟ್ ಕೂಡುತ್ತಾರೆ, ಇಬ್ಬರ ನಾಯಕರಿಗೆ ಜನ ಯಾರಿಗೆ ಆಶೀರ್ವಾದ ಮಾಡುತ್ತಾರೆ ಎಂಬುವುದು ಕಾದುನೋಡಬೇಕಾಗಿದೆ.