ಲಕ್ನೋ: ಇತ್ತೀಚೆಗೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಪತ್ತೆಯಾದ ಟೈಂ ಬಾಂಬ್ ಪ್ರಕರಣದಲ್ಲಿ, ಬಾಂಬ್ ಸಿದ್ಧಪಡಿಸುವಂತೆ ಬಂಧಿತ ಆರೋಪಿ ಜಾವೇದ್ಗೆ 10,000 ರೂ. ಮುಂಗಡ ಹಣ ನೀಡಿದ ಮಹಿಳೆಯನ್ನು ವಿಶೇಷ ಪೊಲೀಸ್ ಪಡೆ (ಎಸ್ಟಿಎಫ್) ಬಂಧಿಸಿದೆ.
ಬಂಧಿತ ಮಹಿಳೆಯನ್ನು ಇಮ್ರಾನ ಎಂದು ಗುರುತಿಸಲಾಗಿದೆ. ಕಬ್ಬಿಣದ ಗುಂಡುಗಳಿಂದ ತುಂಬಿದ ಗಾಜಿನ ಬಾಟಲಿಗಳನ್ನು ಬಳಸಿ ಟೈಮ್ ಬಾಂಬ್ಗಳನ್ನು ತಯಾರಿಸಿದ ಆರೋಪದ ಮೇಲೆ ಇತ್ತೀಚೆಗೆ ಜಾವೇದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಇದಾದ ಬಳಿಕ ವಿಚಾರಣೆಯಲ್ಲಿ ಮಹಿಳೆ ಬಾಂಬ್ ತಯಾರಿಸುವಂತೆ ಹೇಳಿದ್ದಾಗಿ ತಿಳಿದು ಬಂದಿತ್ತು. ಇದೀಗ ಪೊಲೀಸರು ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
2013ರಲ್ಲಿ ಮುಜಾಫರ್ ನಗರದಲ್ಲಿ ನಡೆದಿದ್ದ ಹಿಂಸಾಚಾರದ ವೇಳೆ ಸಹ ಇಂತಹ ಬಾಂಬ್ಗಳನ್ನು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದೆ ಎಂದು ಇಮ್ರಾನಾ ತಪ್ಪೊಪ್ಪಿಕೊಂಡಿದ್ದಾಳೆ. ಅಲ್ಲದೇ ಬಾಂಬ್ ತಯಾರಿಸಿ ಕೊಟ್ಟ ಬಳಿಕ 40,000 ರೂ. ನೀಡುವುದಾಗಿ ಮಹಿಳೆ ಹೇಳಿದ್ದಳು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಜಾವೇದ್, ಪಟಾಕಿ ತಯಾರಕನಾದ ತನ್ನ ಚಿಕ್ಕಪ್ಪ ಮನೆಯಲ್ಲಿದ್ದುಕೊಂಡು ಬಾಂಬ್ಗಳನ್ನು ತಯಾರಿಸಲು ಕಲಿತಿದ್ದೇನೆ. ಅಲ್ಲದೇ ಯೂಟ್ಯೂಬ್ ಮತ್ತು ಇಂಟರ್ನೆಟ್ ಮೂಲಕ ಕೆಲವು ಮಾಹಿತಿಯನ್ನು ಪಡೆದುಕೊಂಡಿದ್ದೇನೆ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಬಾಂಬ್ ನಿಷ್ಕ್ರಿಯ ದಳವು ನಾಲ್ಕು ಬಾಂಬ್ಗಳನ್ನು ನ್ಯಾಜುಪುರದ ಕಾಡಿನಲ್ಲಿ ನಿಷ್ಕ್ರಿಯಗೊಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.