ಹುಬ್ಬಳ್ಳಿ: ಗಾಲಿ ಜನಾರ್ದನ ರೆಡ್ಡಿ (JanardhanReddy) ಯ ಪಕ್ಷ ಧೂಳಿಪಟವಾಗಲಿದೆ. ಸುಪ್ರೀಂಕೋರ್ಟ್ ಬಳ್ಳಾರಿ ಮತ್ತು ಆಂಧ್ರ ಪ್ರದೇಶ ಪ್ರವೇಶಕ್ಕೆ ನಿರ್ಬಂಧ ಹಾಕಿದೆ. ಇಂಥವರು ಸಾರ್ವಜನಿಕ ಜೀವನಕ್ಕೆ ಬರಬಾರದು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ (S. R. Hiremath) ಎಂದು ಹೇಳಿದರು.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಇಂಥವರ ರಾಜಕೀಯ ಪಕ್ಷ ಅಸ್ತಿತ್ವಕ್ಕೆ ತರುವುದು ಸರಿಯಲ್ಲ. ದಶಕಗಳ ಹಿಂದ ಇಂಥದ್ದೊಂದು ಪ್ರಯತ್ನ ನಡೆದಿತ್ತು. ಗಾಲಿ ಜನಾರ್ದನ ರೆಡ್ಡಿ ಬಲಗೈ ಬಂಟ ಶ್ರೀರಾಮುಲು (Sriramulu) ಬಿ.ಎಸ್.ಆರ್. ಆರಂಭಿಸಿದ್ದರು. ಬಿಎಸ್‍ಆರ್ ಗಾಳಿಪಟದಂತೆ ಹಾರಿ ಹೋಗಲು ನಾವು ಪಾದಯಾತ್ರೆ ಮಾಡಿದ್ದೆವು ಎಂದರು.
ಜನಾರ್ದನ ರೆಡ್ಡಿಗೂ ನೆಲ ಕಚ್ಚುವ ಸಮಯ ಬಂದೇ ಬರುತ್ತದೆ. ಇಂಥವರ ಪಕ್ಷಕ್ಕೆ ನಮ್ಮ ಪ್ರಜಾಪ್ರಭುತ್ವದಲ್ಲಿ ಯಾವುದೇ ಸ್ಥಾನ ಇರಬಾರದು ಎಂದು ಅವರು ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಕಾನೂನು ಸಚಿವ ಕಿರಣ್ ರಿಜೀಜು ಹಾಗೂ ಉಪರಾಷ್ಟ್ರಪತಿ ಜಗದೀಪ್ ಧನಕರ್ ನ್ಯಾಯಾಂಗ ವ್ಯವಸ್ಥೆಯನ್ನು ಅಪಮಾನ ಮಾಡುವ ಕೆಲಸ ಮಾಡಿದ್ದಾರೆ. ಸಂವಿಧಾನದ ಸಿದ್ಧಾಂತಗಳನ್ನು ಗಾಳಿಗೆ ತೂರಿದ್ದಾರೆ. ಇವರು ತಮ್ಮ ಸ್ಥಾನದಲ್ಲಿ ಮುಂದುವರಿಯುವ ಮೌಲ್ಯವನ್ನು ಕಳೆದುಕೊಂಡಿದ್ದಾರೆ. ಇಂಥವರ ವಿರುದ್ಧದ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಎಸ್.ಆರ್.ಹಿರೇಮಠ್ ಹೇಳಿದರು.