ಚಿತ್ರದುರ್ಗ: ಮಧ್ಯ ಕರ್ನಾಟಕದ ಬುಡಕಟ್ಟು ಸಮುದಾಯಗಳ ಆರಾಧ್ಯ ದೈವ, ಐತಿಹಾಸಿಕ ಸುಪ್ರಸಿದ್ಧ ಕ್ಷೇತ್ರ ಹಾಗೂ ಮಾಡಿದಷ್ಟು ನೀಡು ಭಿಕ್ಷೆ ಎಂಬ ತತ್ವ ಸಂದೇಶ ಸಾರಿರುವ ಪವಾಡ ದೈವ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಶ್ರೀ ಕ್ಷೇತ್ರ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿಯ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ಜರುಗಿತು.
ಉರಿ ಬಿಸಿಲು, ಗಾಳಿ, ದೂಳು ಯಾವುದನ್ನೂ ಲೆಕ್ಕಿಸದೆ ತಿಪ್ಪೇಶನ ರಥೋತ್ಸವಕ್ಕೆ ಬೆಳಗ್ಗೆಯಿಂದಲೇ ಜನಸಾಗರ ಹರಿದು ಬಂದಿತ್ತು. ನಾಯಕನಹಟ್ಟಿಯ ದೊಡ್ಡ ಕೆರೆ ಕಟ್ಟಿಸಿದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀಗುರು ತಿಪ್ಪೇರುದ್ರಸ್ವಾಮಿ ಪವಾಡಗಳ ಮೂಲಕ ಮಧ್ಯ ಕರ್ನಾಟಕದ ಜನಮನದಲ್ಲಿ ನೆಲೆ ನಿಂತಿದ್ದಾರೆ.
ತಿಪ್ಪೇರುದ್ರಸ್ವಾಮಿ ಐಕ್ಯವಾಗಿರುವ ಹೊರಮಠ ಹಾಗೂ ದೇವರ ವಿಗ್ರಹ ಹಾಗೂ ಮುಖ್ಯವಾಗಿರುವ ಒಳಮಠ ಎರಡೂ ಕಡೆಗಳಲ್ಲಿ ಬೆಳಗ್ಗೆಯಿಂದಲೇ ಬಿಡುವಿಲ್ಲದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನಡೆಯುತ್ತಿದ್ದವು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಚಿತ್ತಾ ನಕ್ಷತ್ರದಲ್ಲಿ ತಿಪ್ಪೇರುದ್ರಸ್ವಾಮಿ ರಥವನ್ನು ರಥ ಬೀದಿಯಿಂದ ಹೊರಮಠದವರೆಗೆ ಎಳೆಯಲಾಯಿತು. ಈ ವೇಳೆ ಸಾಹಸ್ತ್ರಾರು ಭಕ್ತರು ರಥವನ್ನು ಎಳೆಯುವ ಮೂಲಕ ಭಕ್ತಿಭಾವದ ಸಮರ್ಪಣೆ ಅರ್ಪಿಸಿದರು.
ಮುಕ್ತಿ ಬಾವುಟ 55 ಲಕ್ಷಕ್ಕೆ ಹರಾಜು: ಶ್ರೀ ತಿಪ್ಪೇರುದ್ರಸ್ವಾಮಿ ಜಾತ್ರೆಯ ವಿಶೇಷಗಳಲ್ಲಿ ಒಂದಾಗಿರುವ ಮುಕ್ತಿ ಬಾವುಟದ ಹರಾಜು ಪ್ರಕ್ರಿಯೆಯಲ್ಲಿ ಹಲವರು ಭಾಗಿಯಾಗಿದ್ದರು. ಸರ್ಕಾರಿ ಸವಾಲು 10 ಲಕ್ಷದಿಂದ ಆರಂಭಗೊಂಡ ಹರಾಜು ಪ್ರಕ್ರಿಯೆ ಅಂತಿಮವಾಗಿ ಮಾಜಿ ಸಚಿವ ಡಿ. ಸುಧಾಕರ್ ಅವರು 55ಲಕ್ಷ ರೂಪಾಯಿಗೆ ಮುಕ್ತಿ ಬಾವುಟವನ್ನು ಹರಾಜು ಪ್ರಕ್ರಿಯೆಯಲ್ಲಿ ತಮ್ಮದಾಗಿಸಿಕೊಂಡರು. ನಂತರ ದೊಡ್ಡ ರಥಕ್ಕೆ ಪೂಜಿ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.