ಜೈಪುರ್: ಕಿಡಿಗೇಡಿಗಳ ಕಿರುಕುಳದಿಂದ ಬೇಸತ್ತು ಇಬ್ಬರು ಅಪ್ರಾಪ್ತ ಸಹೋದರಿಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದ (Rajasthan) ಪ್ರತಾಪಗಡದಲ್ಲಿ ನಡೆದಿದೆ. ಬಾಲಕಿಯರು ಹಾಸ್ಟೆಲ್ನಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದರು. ಇವರಿಗೆ ಅಪ್ರಾಪ್ತ ಸೇರಿದಂತೆ ಮೂವರು ಯುವಕರು ಕಿರುಕುಳ ನೀಡಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು (Police) ಬಂಧಿಸಿದ್ದಾರೆ.
ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕಿಯರು ವಿಷ ಸೇವಿಸಿದ ವಿಚಾರ ತಿಳಿದ ಬಳಿಕ ಅವರನ್ನು ಅಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ವೈದ್ಯರು ಈ ವೇಳೆ ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಬಳಿಕ ಬಾಲಕಿಯರ ತಂದೆ ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಅನ್ವಯ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಚಾರವಾಗಿ ರಾಜಸ್ಥಾನದ ಬಿಜೆಪಿ ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್, ಅಶೋಕ್ ಗೆಹ್ಲೋಟ್ ಅವರ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. ಈ ಘಟನೆಯು ರಾಜ್ಯದ ಕಳಪೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಸೂಚಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.