ಹಾಲಿವುಡ್ ನ ಅತ್ಯಂತ ಜನಪ್ರಿಯ ಸಿನಿಮಾಗಳಲ್ಲಿ ಒಂದಾದ ಟೈಟಾನಿಕ್ ಸಿನಿಮಾದಲ್ಲಿ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದ ನಟ ಬರ್ನಾರ್ಡ್ ನಿಧನರಾಗಿದ್ದಾರೆ. 79ರ ವಯಸ್ಸಿನ ಈ ನಟ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಲಿಸದೆ ಕೊನೆಯುಸಿರೆಳೆದಿದ್ದಾರೆ.
ಹಿಲ್ ಅವರು ಟೈಟಾನಿಕ್ ಚಿತ್ರದಲ್ಲಿ ‘ಕ್ಯಾಪ್ಟನ್ ಎಡ್ವರ್ಡ್ ಸ್ಮಿತ್’ ಎಂಬ ಅಪ್ರತಿಮ ಪಾತ್ರವನ್ನು ಇವರು ನಿರ್ವಹಿಸಿದ್ದರು. ಇದಲ್ಲದೆ, ‘ಲಾರ್ಡ್ ಆಫ್ ದಿ ರಿಂಗ್ಸ್’ ಚಿತ್ರದ ಮೂಲಕವೂ ಜನಮನ್ನಣೆ ಗಳಿಸಿದ್ದರು. ಚಲನಚಿತ್ರಗಳಲ್ಲಿ ಮಾತ್ರವಲ್ಲದೆ ಟಿವಿ ಶೋಗಳು ಮತ್ತು ರಂಗಭೂಮಿಯಲ್ಲಿಯೂ ಅವಿರತ ಕೆಲಸ ಮಾಡಿ ಪ್ರೇಕ್ಷಕರ ಮನ ಗೆದ್ದಿದ್ದರು.
11 ಆಸ್ಕರ್ ಪ್ರಶಸ್ತಿಗಳನ್ನು ಪಡೆದ ಎರಡು ಚಿತ್ರಗಳಲ್ಲಿ ನಟಿಸಿರುವ ಏಕೈಕ ನಟ ಎಂಬ ಹೆಗ್ಗಳಿಕೆಯೂ ಹಿಲ್ ಅವರದ್ದು. ಟೈಟಾನಿಕ್ ಮತ್ತು ಲಾರ್ಡ್ ಆಫ್ ದಿ ರಿಂಗ್ಸ್ ಚಿತ್ರಗಳು ತಲಾ 11 ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿದ್ದವು. ಬರ್ನಾರ್ಡ್ ತಮ್ಮ ಅತ್ಯುತ್ತಮ ಅಭಿನಯಕ್ಕಾಗಿ ಹಿಲ್ ಅವರು BAFTA ಪ್ರಶಸ್ತಿ, ಬ್ರಾಡ್ಕಾಸ್ಟಿಂಗ್ ಪ್ರೆಸ್ ಗಿಲ್ಡ್ ಪ್ರಶಸ್ತಿ ಮತ್ತು ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆದಾಗ್ಯೂ, 2004ರಲ್ಲಿ ಮೋಷನ್ ಪಿಕ್ಚರ್ನಲ್ಲಿ (ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಟರ್ನ್ ಆಫ್ ದಿ ಕಿಂಗ್) ಅತ್ಯುತ್ತಮ ಅಭಿನಯಕ್ಕಾಗಿ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ ಪಡೆದಿದ್ದರು.
ಬರ್ನಾರ್ಡ್ ನಿಧನಕ್ಕೆ ಕೇವಲ ಹಾಲಿವುಡ್ ಮಾತ್ರವಲ್ಲ, ಜಗತ್ತಿನ ಅನೇಕ ತಂತ್ರಜ್ಞರು ಹಾಗೂ ಕಲಾವಿದರು ಮತ್ತು ಅಭಿಮಾನಿಗಳ ಕಂಬನಿ ಮಿಡಿದಿದ್ದಾರೆ.