ಸಾಕಷ್ಟು ವರ್ಷಗಳ ಬಳಿಕ ನಟಿ ರಮ್ಯಾ ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ. ತಮ್ಮದೇ ಆ್ಯಪಲ್ ಬಾಕ್ಸ್ ಸಿನಿಮಾದ ಮೂಲಕ ಮತ್ತೆ ಎಂಟ್ರಿಕೊಟ್ಟಿದ್ದು ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ. ಈ ಮಧ್ಯೆ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಟೈಟಲ್ ತಮ್ಮದೆಂದು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಕೋರ್ಟ್ ತೀರ್ಪು ನಟಿ ರಮ್ಯಾ ಪರವಾಗಿ ಬಂದಿದೆ.
ತಾವು ಇದೇ ಹೆಸರಿನ ಟೈಟಲ್ ನಲ್ಲಿ ಸಿನಿಮಾ ಮಾಡುತ್ತಿದ್ದು ಮತ್ತು ಈ ಶೀರ್ಷಿಕೆಯನ್ನು ಬೇರೆಯೊಬ್ಬರು ಬಳಸುತ್ತಿದ್ದಾರೆ. ಅದನ್ನು ತಡೆಯಬೇಕು ಎಂದು ರಾಜೇಂದ್ರ ಸಿಂಗ್ ಬಾಬು ಮನವಿ ಮಾಡಿಕೊಂಡಿದ್ದರು. ಆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದ್ದು, ರಾಜೇಂದ್ರ ಸಿಂಗ್ ಬಾಬು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ವಾಣಿಜ್ಯ ಮಂಡಳಿಗೆ ಪತ್ರ ಬರೆದ ಬೆನ್ನಲ್ಲೇ ಆ ಟೈಟಲ್ ಬಗ್ಗೆ ಪರಿಶೀಲಿಸಿದಾಗ ಅಸಲಿಯಾಗಿ ಅದು ರಾಜೇಂದ್ರ ಸಿಂಗ್ ಬಾಬು ಅವರ ಹೆಸರಿನಲ್ಲಿ ಇರಲಿಲ್ಲ ಎನ್ನುವುದು ಗೊತ್ತಾಗಿತ್ತು. ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಮಾಡುತ್ತಿರುವ ಬಿ.ಕೆ.ಗಂಗಾಧರ್ ಅವರು ಈ ಟೈಟಲ್ ಅನ್ನು ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದ್ದಾರೆ. ಅಲ್ಲದೇ, ರಮ್ಯಾ ಸಿನಿಮಾ ಮಾಡುತ್ತೇನೆ ಎಂದಾಗ, ಅವರಿಗೆ ಆ ಟೈಟಲ್ ಅನ್ನು ವರ್ಗಾಯಿಸಿದ್ದಾರೆ ಎಂದು ಸ್ವತಃ ವಾಣಿಜ್ಯ ಮಂಡಳಿಯ ಅಧ್ಯಕ್ಷರೇ ಸ್ಪಷ್ಟನೆ ನೀಡಿದ್ದಾರೆ.