ಸಮಾಜದ ವಿವಿಧ ಗಣ್ಯರು, ಹಿರಿ-ಕಿರಿಯ ಕಲಾವಿದರು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆ ದಕ್ಷಿಣ ಭಾರತದ ಸುದ್ದಿವಾಹಿನಿಗಳ ಪ್ರತಿಭಾನ್ವಿತ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಗರದ ಪ್ಯಾಲೇಸ್ ಗ್ರೌಂಡ್ ನಲ್ಲಿ ಆಗಸ್ಟ್ 17 ರಂದು “ದಿ ನ್ಯೂ ಇಂಡಿಯನ್ ಟೈಮ್ಸ್” ಆಯೋಜಿಸಿದ 2024 ರ ದಕ್ಷಿಣ ಭಾರತದ ಮಾಧ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಳೆದ ನಾಲ್ಕು ದಶಕಗಳಿಂದ ಮಾಧ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ವರ್ಷದ ಉತ್ತಮ ವಿಭಾಗ ಎಂಬ ಪ್ರಶಸ್ತಿಯನ್ನು ಮೂಡಿಗೇರಿಸಿಕೊಂಡಿತು. ಪ್ರಶಸ್ತಿಯನ್ನು ಪತ್ರಕರ್ತ ಅರವಿಂದ್ ಪ್ರಧಾನ ಮಾಡಿದರು. ಕಾರ್ಯಕ್ರಮದಲ್ಲಿ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಜೆ. ಎಂ ಚಂದುನವರು, ಮುಖ್ಯಸ್ಥ ಡಾ.ಸಂಜಯಕುಮಾರ ಮಾಲಗತ್ತಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಬಿಡುವಿನ ಸಮಯದಲ್ಲಿ ಭರತನಾಟ್ಯ, ಕಥಕ್, ಯಕ್ಷಗಾನ ಸೇರಿದಂತೆ ವಿವಿಧ ನೃತ್ಯ ಪ್ರದರ್ಶನಗಳನ್ನು ವಿವಿಧ ನೃತ್ಯ ಕಲಾ ತಂಡಗಳಿಂದ ಪ್ರದರ್ಶಿಸಲಾಯಿತು. ವಿಶೇಷ ಅಲಂಕಾರಿಕ ಉಡುಗೆಯಲ್ಲಿ ಮಿಂಚಿದ್ದ ನೃತ್ಯ ತಂಡಗಳು ಅಲ್ಲಿ ನೆರೆದಿದ್ದವರ ಮನ ಸೆಳೆಯುವಂತಿತ್ತು. ಪ್ರಶಸ್ತಿ ಸ್ವೀಕರಿಸಿದ ಸಾಧಕರು ತಮ್ಮ ಕುಟುಂಬದ ಸದಸ್ಯರೊಂದಿಗೆ ಹಾಗೂ ಸಹೋದ್ಯೋಗಿಗಳ ಜೊತೆಯಲ್ಲಿ ಸಂಭ್ರಮದ ಕ್ಷಣವನ್ನು ಸಂಭ್ರಮಿಸಿದರು.
ದಿ ನ್ಯೂ ಇಂಡಿಯನ್ ಟೈಮ್ಸ್ (ಟಿಎನ್ ಐಟಿ) ಒಂಬತ್ತು ವರ್ಷಗಳನ್ನು ಪೂರೈಸಿದೆ. ಸಂಸ್ಥೆಯ ಸ್ಥಾಪಕ ಹಾಗೂ ಸಿಇಒ ಎ.ರಾಘವೇಂದ್ರ (ರಘು ಭಟ್) ಅವರ ಕನಸಿನ ಕೂಸಾದ ಟಿಎನ್ಐಟಿ, ಸತತ ಏಳು ವರ್ಷಗಳಿಂದ ಕರ್ನಾಟಕದ ಮಾಧ್ಯಮಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿತ್ತು. ಈ ವರ್ಷದಿಂದ ದಕ್ಷಿಣ ಭಾರತದ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಮಾಧ್ಯಮಗಳ ಸಾಧಕ ಪತ್ರಕರ್ತರನ್ನು ಗುರುತಿಸಿ ಪ್ರಶಸ್ತಿ ಕೊಡುವಷ್ಟರ ಮಟ್ಟಕ್ಕೆ ಬೆಳೆದಿರುವುದು ಸಾಧನೆಯೇ ಸರಿ. ನಿತ್ಯವೂ ಬ್ರೇಕಿಂಗ್ ಸುದ್ದಿಗಳ ಜಂಜಾಟದಲ್ಲಿ ತಮ್ಮನ್ನು ತಾವು ಮರೆತ ಪತ್ರಕರ್ತರು ಒಳಗೊಂಡಂತೆ ಮಾಧ್ಯಮ ಸಂಸ್ಥೆಯ ಎಲ್ಲ ವರ್ಗದವರನ್ನು ಗುರುತಿಸುವ ಮಹತ್ವದ ಕಾರ್ಯವನ್ನು ದಿ ನ್ಯೂ ಇಂಡಿಯನ್ ಟೈಮ್ಸ್ ಮಾಡುತ್ತಿದೆ. ಹೀಗೆ ಹಂತ ಹಂತವಾಗಿ ಸಾಧನೆಯ ಶಿಖರವೇರುತ್ತಿರುವ ಟಿಎನ್ಐಟಿ ಇನ್ನೂ ವಿಸ್ತಾರವಾಗಿ ಬೆಳೆಯುತ್ತಿದೆ.