ಫೆ.14ರಂದು ಆತ್ಮಹತ್ಯೆಗೆ ಶರಣಾಗಿರುವ ಸ್ಯಾಂಡಲ್ ವುಡ್ ನಿರ್ಮಾಪಕ ಹಾಗೂ ಉದ್ಯಮಿ ಸೌಂದರ್ಯ ಜಗದೀಶ್ ಅವರ ಸಮಾಧಿಗೆ 3ನೇ ದಿನವಾದ ಇಂದು ಹಾಲು ತುಪ್ಪು ಕಾರ್ಯವನ್ನು ಅವರ ಕುಟುಂಬಸ್ಥರು ನೆರವೇರಿಸಿದ್ದಾರೆ.
ಜಗದೀಶ್ ಪತ್ನಿ ಶಶಿರೇಖ ಹಾಗೂ ಪುತ್ರ ಸ್ನೇಹಿತ್ ಹಾಗೂ ಕುಟುಂಬದ ಸದಸ್ಯರು ಹಿರಿಸಾವೆಗೆ ತೆರಳಿದ್ದು, 3ನೇ ದಿನದ ಕಾರ್ಯವನ್ನು ಪೂರೈಸಿದ್ದಾರೆ. ಭಾನುವಾರ ಬೆಳ್ಳಂಬೆಳಗ್ಗೆ ಆತ್ಮಹತ್ಯೆಗೆ ಶರಣಾಗುವ ಮೂಲಕ ಇಡೀ ಕುಟುಂಬಕ್ಕೆ ಶಾಕ್ ನೀಡಿದ್ದರು. ಅವರ ಅಗಲಿಕೆ ಕುಟುಂಬಕ್ಕೆ ಮಾತ್ರವಲ್ಲ, ಅಭಿಮಾನಿಗಳಲ್ಲ ಅಪಾರ ದುಃಖ ನೀಡಿದೆ.
ಸಿನಿಮಾ ಮತ್ತು ನಾನಾ ಉದ್ಯಮಗಳಲ್ಲಿ ತೊಡಗಿಕೊಂಡಿದ್ದ ಸೌಂದರ್ಯ ಜಗದೀಶ್, ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಕುಟುಂಬ ಪೊಲೀಸರ ಮುಂದೆ ಹೇಳಿರುವ ಹೇಳಿಕೆಯಲ್ಲಿ ಜಗದೀಶ್ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಸೌಂದರ್ಯ ಜಗದೀಶ್ ಅವರ ಅತ್ತೆ ಮೃತಪಟ್ಟಿದ್ದು ಆ ಬಳಿಕ ಜಗದೀಶ್ ಮಾನಸಿಕವಾಗಿ ಕುಗ್ಗಿದ್ದರು. ಇದೇ ಕಾರಣಕ್ಕಾಗಿ ಕೆಲವು ದಿನಗಳಿಂದ ಔಷಧಿ ತೆಗೆದುಕೊಳ್ಳುತ್ತಿದ್ದು ಇದೀಗ ಆತ್ಮಹತ್ಯೆಗೆ ಮುಂದಾಗಿದ್ದಾರೆ.