16ನೇ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ 6 ಗಂಟೆಗೆ ತೆರೆ ಬೀಳಲಿದ್ದು, ಬೃಹತ್ ಸಮಾವೇಶ, ಸಾರ್ವಜನಿಕ ಸಭೆ, ರೋಡ್ ಶೋ ಮೂಲಕ ಮತದಾರರನ್ನು ಸೆಳೆಯಲು ಕಲ್ಪಿಸಲಾಗಿದ್ದ ಕಾಲಾವಧಿ ಮುಕ್ತಾಯವಾಗಲಿದೆ. ಮತದಾನಕ್ಕೆ ಮುಂಚಿನ ದಿನ ಅಭ್ಯರ್ಥಿಗಳು ಮನೆಮನೆಗೆ ಭೇಟಿ ನೀಡಿ ಮತ ಯಾಚಿಸುವುದಕ್ಕಷ್ಟೇ ಅವಕಾಶವಿದೆ.
ಘಟಾನುಘಟಿ ಬಿಜೆಪಿ ನಾಯಕರಿಂದ ಪ್ರಚಾರ
ಬಿಜೆಪಿ ಪರವಾಗಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ಉಡುಪಿ ಜಿಲ್ಲೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೂ ಅವರು ಭೇಟಿ ಕೊಡಲಿದ್ದಾರೆ. ಸಂಜೆ ಉಡುಪಿಯಲ್ಲಿ ರೋಡ್ ಶೋ ಕೂಡಾ ನಡೆಸಲಿದ್ದಾರೆ. ಇನ್ನು ಕೇಂದ್ರ ಸಚಿವ ವಿ.ಕೆ ಸಿಂಗ್ ಅವರು ಬೆಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಆರ್ ಆರ್ ನಗರ, ಜಯನಗರ, ಬನ್ನೇರುಘಟ್ಟದಲ್ಲಿ ವಿಕೆ ಸಿಂಗ್ ಪ್ರಚಾರ ನಡೆಸಲಿದ್ದಾರೆ.
ಚಾಮರಾಜನಗರದಲ್ಲಿ ಸಿದ್ದರಾಮಯ್ಯ ಪ್ರಚಾರ
ಚಾಮರಾಜನಗರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಚಾರ ನಡೆಸಿದರು. ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿಯಾದ ಗಣೇಶ್ ಪ್ರಸಾದ್ ಪರವಾಗಿ ಅವರು ಪ್ರಚಾರ ನಡೆಸಿದರು. ಅಲ್ಲಿ, ವಿ. ಸೋಮಣ್ಣ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಹಾಗಾಗಿ, ಆ ಕ್ಷೇತ್ರ ಕಾಂಗ್ರೆಸ್ ಪಾಲಿಗೆ ಕ್ಲಿಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅಲ್ಲಿ ಮೇ 8ರಂದು ಪ್ರಚಾರ ನಡೆಸಿದ್ದಾರೆ.
ಸ್ವಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಪ್ರಚಾರ
ನಾಮಪತ್ರ ಸಲ್ಲಿಕೆ ಬಳಿಕ, ಮೊದಲ ಬಾರಿಗೆ ಡಿಕೆ ಶಿವಕುಮಾರ್ ಖುದ್ದು ಇಂದು ಪ್ರಚಾರಕ್ಕಿಳಿದಿದ್ದಾರೆ. ಕನಕಪುರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಇಷ್ಟು ದಿನ ಡಿಕೆಶಿ ಕುಟುಂಬಸ್ಥರು ಮತಯಾಚನೆ ಮಾಡಿದ್ದರು. ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಹಿನ್ನೆಲೆಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ಶಿಕಾರಿಪುರದಲ್ಲಿ ಪುತ್ರನ ಪರವಾಗಿ ಬಿಎಸ್ ವೈ ಮತಯಾಚನೆ
ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಶಿಕಾರಿಪುರವು ಯಡಿಯೂರಪ್ಪನವರ ಸ್ವಕ್ಷೇತ್ರವಾಗಿದ್ದು, ಇತ್ತೀಚೆಗೆ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಹಿನ್ನೆಲೆಯಲ್ಲಿ ಅವರ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ.
ಮಂಗಳೂರಿಗೆ ಇಂದು ಮಹಾ ಸಿಎಂ ಏಕನಾಥ್ ಶಿಂಧೆ
ಕರ್ನಾಟಕ ವಿಧಾನಸಭಾ ಚುನಾವಣೆ 2023 – ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಇಂದು (ಮೇ 8) ಮಂಗಳೂರಿನಲ್ಲಿ ಬಿಜೆಪಿ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಮಂಗಳೂರಿನ ಕಾಪುವಿನಲ್ಲಿ ಹಾಗೂ ಉಡುಪಿಯಲ್ಲಿ ಆಯೋಜಿಸಲಾಗಿರುವ ರೋಡ್ ಶೋಗಳಲ್ಲಿ ಹಾಗೂ ಬೃಹತ್ ಸಮಾವೇಶಗಳಲ್ಲಿ ಅವರು ಮಾತನಾಡಲಿದ್ದಾರೆ. ಉಡುಪಿ ತಲುಪುವ ಮುನ್ನ ಅವರು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಲಿದ್ದಾರೆ. ಇತ್ತೀಚೆಗೆ, ಮಹಾರಾಷ್ಟ್ರದ ಡಿಸಿಎಂ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಬಿಜೆಪಿ ಪರವಾಗಿ ಪ್ರಚಾರ ನಡೆಸಿದ್ದರು. ಈಗ ಮಹಾರಾಷ್ಟ್ರ ಸಿಎಂ, ಶಿವಸೇನೆಯ ನಾಯಕರಾದ ಶಿಂಧೆ ಅವರು ಮಂಗಳೂರಿಗೆ ಬರಲಿದ್ದಾರೆ.