ನವರಾತ್ರಿಯಲ್ಲಿ ದುರ್ಗಾ ದೇವಿಯ ಆರಾಧನೆಯಲ್ಲಿ ಒಂಬತ್ತು ಅವತಾರಗಳು ಬಹಳ ಮಹತ್ವದ ಪಾತ್ರವನ್ನು ವಹಿಸಿವೆ. ಒಂದೊಂದು ದಿನವನ್ನೂ ಒಂದೊಂದು ದೇವಿಯ ಅವತಾರಕ್ಕೆ ಮೀಸಲಿಡಲಾಗಿದೆ. ನವರಾತ್ರಿ ಹಬ್ಬದ ಎರಡನೇ ದಿನ ಬ್ರಹ್ಮಚಾರಿಣಿ ದೇವಿಗೆ ಮೀಸಲಿಡಲಾಗಿದೆ.
ನವರಾತ್ರಿಯ ಎರಡನೇ ದಿನ ದೇವಿಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಬ್ರಹ್ಮಚಾರಿಣಿಯೆಂದರೆ ಇನ್ನೂ ಮದುವೆಯಾಗದಿರುವ ಯುವತಿ ಎಂದರ್ಥ ಸೌಮ್ಯಳೂ, ಶಾಂತ ಸ್ವಭಾವವನ್ನು ಧರಿಸಿರುವ ಬ್ರಹ್ಮಚಾರಿಣಿಯು ಮನಸ್ಸನ್ನು ಪ್ರಶಾಂತಗೊಳಿಸಿ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾಳೆ.
ದುರ್ಗಾ ದೇವಿಯ ಎರಡನೇ ರೂಪವಾದ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಲಾಗುತ್ತದೆ. ತಾಯಿ ಬ್ರಹ್ಮಚಾರಿಣಿಯನ್ನು ತಪಸ್ಸಿನ ದೇವತೆ ಎಂದು ಕರೆಯಲಾಗುತ್ತದೆ. ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವುದರಿಂದ ವ್ಯಕ್ತಿಯು ತನ್ನ ಜೀವನದಲ್ಲಿ ಎಲ್ಲಾ ರೀತಿಯ ಸುಖಗಳನ್ನು ಪಡೆದುಕೊಳ್ಳುತ್ತಾನೆ. ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವುದು ಹೇಗೆ..? ಮಂತ್ರ, ಪೂಜೆ ವಿಧಿ – ವಿಧಾನಗಳ ಕುರಿತು ಇಲ್ಲಿ ತಿಳಿದುಕೊಳ್ಳಿ.
ತಾಯಿ ಬ್ರಹ್ಮಚಾರಿಣಿಯನ್ನು ತಪಸ್ಸಿನ ದೇವತೆ ಎಂದು ಕರೆಯಲಾಗುತ್ತದೆ. ಆಕೆಯ ಹೆಸರೇ ಹಲವು ರೀತಿಯ ಅರ್ಥಗಳನ್ನು ನೀಡುತ್ತದೆ. ಬ್ರಹ್ಮ ಎಂದರೆ ‘ತಪಸ್ಸು’ ಮತ್ತು ಚಾರಿಣಿ ಎಂದರೆ ‘ನಡೆಸುವವರು’. ಬ್ರಹ್ಮಚಾರಿಣಿ ಎಂದರೆ ತಪಸ್ಸನ್ನು ಮಾಡುವವಳು ಎಂಬರ್ಥವಾಗಿದೆ. ಯಾವ ಓರ್ವ ವ್ಯಕ್ತಿ ತಾಯಿ ಬ್ರಹ್ಮಚಾರಿಣಿಯನ್ನು ಪೂಜಿಸುತ್ತಾನೋ ಅವನು ತಪಸ್ಸು, ತ್ಯಾಗ, ಸಂಯಮ ಮತ್ತು ಪುಣ್ಯವನ್ನು ಪಡೆಯುತ್ತಾನೆ.
ಬ್ರಹ್ಮಚಾರಿಣಿ ಪೂಜೆ ವಿಧಾನ:-
– ಈ ದಿನ ಬೆಳಿಗ್ಗೆ ಮೊದಲು ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಮತ್ತು ಶುಭ್ರವಾದ ಬಟ್ಟೆಗಳನ್ನು ಧರಿಸಿ.
– ತಾಯಿಗೆ ಪಂಚಾಮೃತ ಅಭಿಷೇಕ ಮಾಡಿ.
– ಇದರ ನಂತರ ಅಕ್ಷತೆ, ಚಂದನ ಮತ್ತು ಕುಂಕುಮವನ್ನು ತಾಯಿ ದುರ್ಗೆಗೆ ಅರ್ಪಿಸಿ.
– ತಾಯಿ ಬ್ರಹ್ಮಚಾರಿಣಿ ಕಮಲ ಮತ್ತು ದಾಸವಾಳದ ಹೂವುಗಳನ್ನು ತುಂಬಾ ಇಷ್ಟಪಡುತ್ತಾಳೆ, ಆದ್ದರಿಂದ ಖಂಡಿತವಾಗಿಯೂ ಈ ಹೂವುಗಳನ್ನು ಅರ್ಪಿಸಿ.
– ಕಲಶ ಮತ್ತು ದೇವತೆಯನ್ನು ವಿಧಿ – ವಿಧಾನಗಳ ಪ್ರಕಾರ ಪೂಜಿಸಿ.
– ತುಪ್ಪ ಮತ್ತು ಕರ್ಪೂರದಿಂದ ಮಾಡಿದ ದೀಪದಿಂದ ಕಡ್ಡಾಯವಾಗಿ ದೇವಿಗೆ ಆರತಿಯನ್ನು ಮಾಡಬೇಕು.
ಬ್ರಹ್ಮಚಾರಿಣಿ ದೇವಿಯ ಶಕ್ತಿಯುತ ಮಂತ್ರ
– ಯಾ ದೇವಿ ಸರ್ವ ಭೂತೇಷು ಬ್ರಹ್ಮಚಾರಿಣಿ ರೂಪೇಣ ಸಂಸ್ಥಿತ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
– ಓಂ ದೇವಿ ಬ್ರಹ್ಮಚಾರಿಣ್ಯೈ ನಮಃ
– ದಧನಾಕರ ಪದ್ಮಭಯಂ ಅಕ್ಷಮಾಲಾ ಕಮಂಡಲಂ,
ದೇವೀ ಪ್ರಸಾದಿತು ಮಯಿ ಬ್ರಹ್ಮಚಾರಿಣಿಯನುತ್ತಮ
ಬ್ರಹ್ಮಚಾರಿಣಿ ಪೂಜೆಗೆ ನೈವೇದ್ಯ:-
ತಾಯಿ ಬ್ರಹ್ಮಚಾರಿಣಿಗೆ ಹಳದಿ ಬಣ್ಣದ ಸಿಹಿ ತಿಂಡಿಯನ್ನು ಅರ್ಪಿಸಲು ಮರೆಯದಿರಿ. ಕೇಸರಿ ಬಾತ್ನಂತಹ ಸಿಹಿತಿಂಡಿಗಳಂತೆ ಬಾಳೆಹಣ್ಣು ಇತ್ಯಾದಿಗಳನ್ನು ಅರ್ಪಿಸಬೇಕು. ಇದರಿಂದ ತಾಯಿ ಬ್ರಹ್ಮಚಾರಿಣಿ ಬಹಳ ಸಂತೋಷಪಡುತ್ತಾಳೆ ಮತ್ತು ಆಕೆಯ ಆಶೀರ್ವಾದವನ್ನು ಕರುಣಿಸುತ್ತಾಳೆ.
ಬ್ರಹ್ಮಚಾರಿಣಿ ಕಥೆ
ನವರಾತ್ರಿಯ ಎರಡನೇ ದಿನ ದುರ್ಗಾ ದೇವಿಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಪಾರ್ವತಿಯಾಗಿ ಹಿಮಾಲಯನ ಪುತ್ರಿಯಾಗಿ ಜನಿಸಿದ ದೇವಿಯು ಶಿವನನ್ನು ಪತಿಯನ್ನಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡುತ್ತಾಳೆ. ಬಹಳ ಕಠಿಣವಾದ ತಪಸ್ಸು ಮಾಡಿದ ಕಾರಣದಿಂದಾಗಿ ದೇವಿಗೆ ತಪಶ್ಚಾರಿಣೀ ಅರ್ಥಾತ್ ಬ್ರಹ್ಮಚಾರಿಣೀ ಎನ್ನುವ ಹೆಸರು ಬಂದಿದೆ. ತಪಸ್ಸು ಮಾಡುತ್ತಿರುವ ಕಾಲದಲ್ಲಿ ಆಕೆ ಕೇವಲ ಹೂವು, ಹಣ್ಣುಗಳನ್ನು ಹಾಗೂ ಎಲೆಗಳನ್ನು ಮಾತ್ರ ಒಂದು ಕಾಲದವರೆಗೂ ಸೇವಿಸುತ್ತಿದ್ದಳು, ನಂತರದಲ್ಲಿ ಎಲೆಯ ಸೇವನೆಯನ್ನೂ ನಿಲ್ಲಿಸಿದಳು. ಆಕೆಯ ಕಠಿಣ ತಪಸ್ಸಿನಿಂದ ಶಿವನು ಆಕೆಗೆ ಒಲಿಯುತ್ತಾನೆ.