ಬೆಂಗಳೂರು :- ಇಂದು ಕರ್ನಾಟಕಕ್ಕೆ ಮಾಜಿ AICC ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸಲುದ್ದು, ಮಂಡ್ಯ, ಕೋಲಾರದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ನಡೆಯಲಿದೆ.
ಇಂದು ಮಧ್ಯಾಹ್ನ 1.20ಕ್ಕೆ ರಾಹುಲ್ ಗಾಂಧಿ ಕೇರಳದಿಂದ ಬೆಂಗಳೂರಿನ ಹೆಚ್ಎಎಲ್ಗೆ ಆಗಮಿಸಲಿದ್ದಾರೆ.. ಅಲ್ಲಿಂದ ಮಂಡ್ಯಕ್ಕೆ ತೆರಳಲಿದ್ದು, ಸಾರ್ವಜನಿಕ ಸಭೆಯಲ್ಲಿ ಭಾಗಿ ಆಗಲಿದ್ದಾರೆ. ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ನಂತರ ಅಲ್ಲಿಂದ ಮಧ್ಯಾಹ್ನ 3.30ಕ್ಕೆ ಹೆಲಿಕಾಪ್ಟರ್ ಮೂಲಕ ಕೋಲಾರಕ್ಕೆ ತೆರಳಲಿದ್ದಾರೆ.. ಅಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಮತಬೇಟೆಯಾಡಲಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಚೊಕ್ಕಂಡಹಳ್ಳಿ ಗ್ರಾಮದ ಬಳಿ ಸುಮಾರು 50 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ
ಇಂದು ಮಧ್ಯಾಹ್ನ 3 ಗಂಟೆಗೆ ರಾಹುಲ್ ಗಾಂಧಿ ಅವರು ಹೆಲಿಕಾಪ್ಟರ್ ಮೂಲಕ ಕೋಲಾರಕ್ಕೆ ಆಗಮಿಸಲಿದ್ದಾರೆ. ಹೀಗಾಗಿ ವೇದಿಕೆಯಿಂದ ಸುಮರು 5 ಕಿ.ಮೀ. ದೂರದಲ್ಲಿ ಹೆಲಿಪ್ಯಾಡ್ ನ್ನು ನಿರ್ಮಾಣ ಮಾಡಲಾಗಿದೆ. ಇನ್ನು ಟಿಕೆಟ್ ಹಂಚಿಕೆ ವೇಳೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗುಂಪುಗಾರಿಕೆ ಪ್ರದರ್ಶನ ಮಾಡಿ ಗಮನ ಸೆಳೆದಿದ್ದ ಕೋಲಾರ ಜಿಲ್ಲಾ ಕಾಂಗ್ರೆಸ್ ಇಂದು ಪಕ್ಷದ ರಾಷ್ಟ್ರೀಯ ನಾಯಕರ ಎದುರಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುವ ಸಾಧ್ಯತೆ ಇದೆ.
ಇನ್ನು ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಮೇಗಾ ಪ್ಲಾನ್ ಮಾಡಿದೆ. ಕಳೆದ ವಾರವಷ್ಟೇ ಮೂಡಣ ಬಾಗಿಲು ಮುಳಬಾಗಲಿನ ಕುರುಡುಮಲೆ ವಿನಾಯಕನಿಗೆ ಪೂಜೆ ಸಲ್ಲಿಸುವ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ರಣಕಹಳೆ ಮೊಳಗಿಸಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೋಲಾರ ಲೋಕಸಭಾ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ಮಾಡಿ ತೆರಳಿದ್ದರು. ಈಗ ಮತ್ತೊಮ್ಮೆ ಮತಬೇಟಿಗಾಗಿ ಕಾಂಗ್ರೆಸ್ ನ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೇರಿದಂತೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಸಚಿವರು ಭಾಗವಹಿಸಲಿದ್ದಾರೆ.